ಉದ್ಯಮಿಗಳಿಂದ ಕನ್ನಡಿಗರ ನಿರ್ಲಕ್ಷೃ ಸಲ್ಲದು: ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ

mysore
Published on

ಮೈಸೂರು: ರಾಜ್ಯದ ಸಂಪನ್ಮೂಲದಿಂದ ಕೋಟ್ಯಂತರ ರೂ. ಸಂಪಾದಿಸುವ ಉದ್ಯಮಿಗಳಿಗೆ ಕನ್ನಡ ನಾಡಿನ ನೆಲದವರು ಬೇಡವಾದರೆ ಸಹಿಸಲು ಸಾಧ್ಯ ಇಲ್ಲ. ಉದ್ಯಮಿಗಳ ಈ ನಿಲುವಿನ ವಿರುದ್ಧ ಕನ್ನಡಿಗರು ಹೋರಾಟ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.


ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆಗೆ ಉದ್ಯಮಿಗಳ ಸಂಘ ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಮಸೂದೆ ತರಲು ಮುಂದಾಗಿರುವುದು ಸರಿಯಾದ ಕ್ರಮವಾಗಿದೆ. ಆದರೆ ಉದ್ಯಮಿಗಳಿಗೆ ಹೆದರಿ ಜಾರಿಗೆ ತರಲು ಹಿಂದೇಟು ಹಾಕುತ್ತಿರುವುದು ಸರ್ಕಾರದ ವೈಫಲ್ಯ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆಗೆ ರೈತರು ತಮ್ಮ ಭೂಮಿಯನ್ನು ಮೂರು ಕಾಸಿನ ಪರಿಹಾರಕ್ಕೆ ಬಿಟ್ಟುಕೊಟ್ಟಿದ್ದಾರೆ. ರಾಜ್ಯದ ಜಲ ಕೈಗಾರಿಕೆಗೆ ಬಳಕೆಯಾಗುತ್ತಿದೆ. ಆದಾಗ್ಯೂ, ಕನ್ನಡಿಗರಿಗೆ ಉದ್ಯೋಗ ನೀಡಲು ಉದ್ಯಮಿಗಳು ನಿರ್ಲಕ್ಷೃ ತೋರುತ್ತಿವೆ ಎಂದು ಕಿಡಿಕಾರಿದರು.


ಕನ್ನಡ ನಾಡಿನ ಯುವಜನರು ತಾಂತ್ರಿಕ ಪರಿಣಿತಿಯಲ್ಲಿ ಪ್ರಪಂಚದಲ್ಲೇ ಮುಂಚೂಣಿಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಮುಂದುವರಿದ ದೇಶಗಳು ತಮ್ಮ ಕಂಪನಿಗಳಲ್ಲಿ ರಾಜ್ಯದ ಯುವ ಜನರಿಗೆ ಉದ್ಯೋಗ ನೀಡಿವೆ. ಉದ್ಯಮಗಳ ಬೇಡಿಕೆಯಷ್ಟು ಪರಿಣಿತರು, ತಂತ್ರಜ್ಞರು ರಾಜ್ಯದಲ್ಲಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಮುಲಾಜಿಗೂ ಒಳಗಾಗದೆ ಈ ಕಾಯ್ದೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net