ಅಧಿಕಾರಿಗಳಿಂದ ರೈತರ ನಿರ್ಲಕ್ಷೃ

ಚನ್ನರಾಯಪಟ್ಟಣದ  ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ  ಶಾಸಕ ಸಿ.ಎನ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ  ಕೆಡಿಪಿ ಸಭೆ ನಡೆಯಿತು.
ಚನ್ನರಾಯಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.
Published on

ಚನ್ನರಾಯಪಟ್ಟಣ: ಕಷ್ಟ ಹೇಳಿಕೊಂಡು ಕಚೇರಿಗೆ ಬರುವ ರೈತರ ಕೈಹಿಡಿಯಬೇಕಾದ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿಷ್ಠೆ ಮರೆತು ಕಾಲ ದೂಡುತ್ತಿದ್ದಾರೆ ಎಂದು ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಯೋಗೀಶ್ ಆರೋಪಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ   ಶಾಸಕ ಸಿ.ಎನ್.ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡುವ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ತಾಲೂಕಿನ ರೈತರ ಪ್ರಮುಖ ಬೆಳೆ ತೆಂಗು, ಇಂದು ತೆಂಗಿನ ಕಾಯಿಗೆ ಉತ್ತಮ ದರವಿದೆ. ಆದರೆ ಹಲವಾರು ರೋಗಗಳಿಂದ ತೆಂಗಿನ ಮರಗಳಲ್ಲಿ ಫಸಲಿಲ್ಲ. ನುಸಿ ಬಾಧೆ, ಸುಳಿ ತಿನ್ನುವ ರೋಗ, ಗರಿ ಕಾಯಿಲೆ ಸೇರಿ ಹಲವು ಕಾಯಿಲೆಗಳಿಂದ ತೆಂಗಿನ ಇಳುವರಿ ಕ್ಷೀಣಿಸಿದೆ. ಇದರ ಕುರಿತಾಗಿ ರೈತರ ಸಮಸ್ಯೆ ಹೇಳಿಕೊಳ್ಳಲು ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಗೆ ಆಗಮಿಸಿದರೆ ಅಲ್ಲಿ ಹಿರಿಯ ಸಹಾಕಯ ನಿರ್ದೇಶಕರು ಇರುವುದೇ ಇಲ್ಲ. ಇನ್ನು ಅವರಿಗೆ ಕರೆ ಮಾಡಿದರೆ, ಕರೆ ಸ್ವೀಕರಿಸುವುದಿಲ್ಲ. ಇಂಥ ಅಧಿಕಾರಿಗಳಿಂದ ರೈತರ ಅಭಿವೃದ್ಧಿ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಇದರೊಂದಿಗೆ ಶೇ.60 ಕ್ಕೂ ಹೆಚ್ಚು ರೈತರು ಕೊಬ್ಬರಿ ಮಾಡಿ ಮಾರಾಟ ಮಾಡುತ್ತಾರೆ. ತೆಂಗಿನ ಕಾಯಿಯಿಂದ ಕೊಬ್ಬರಿಗೆ ಸಂಸ್ಕರಣೆ ಮಾಡುವ ಕುರಿತಾಗಿ ಇಲಾಖೆಯಿಂದ ರೈತರಿಗೆ ತಾಂತ್ರಿಕ ಮಾಹಿತಿಯಿಲ್ಲ. ಇದರಿಂದ ಹೆಚ್ಚಾಗಿ ಕೌಟ್ ಸೃಷ್ಟಿಯಾಗಿ ರೈತರು ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಹೋಬಳಿ ಮಟ್ಟಗಳಲ್ಲಿ ತೋಟಗಾರಿಕೆ ಅಧಿಕಾರಿಗಳು ಕೊಬ್ಬರಿ ಸಂಸ್ಕರಣೆ ಕುರಿತಾಗಿ ಕಾರ್ಯಾಗಾರಗಳನ್ನು ನಡೆಸಬೇಕೆಂದರು.

ಈ ವೇಳೆ ಮಾತನಾಡಿದ ಶಾಸಕ ಸಿಎನ್.ಬಾಲಕೃಷ್ಣ, ಒಬ್ಬ ಕೆಡಿಪಿ ಸದಸ್ಯ ದೂರವಾಣಿ ಕರೆ ಮಾಡಿದಾಗ ಅಧಿಕಾರಿಗಳು ಸೌಜನ್ಯದಿಂದ, ಗೌರವದಿಂದ ಮಾತನಾಡುವುದನ್ನು ಕಲಿಯಬೇಕು. ಅವರಾಗಲಿ, ರೈತರಾಗಲಿ ಯಾರೇ ಸಮಸ್ಯೆ ಹೇಳಿಕೊಂಡು ಬಂದರೂ ಮೊದಲು ಸ್ಪಂದಿಸಬೇಕಾದ ಕರ್ತವ್ಯ ಅಧಿಕಾರಿಗಳದ್ದು. ತೋಟಗಾರಿಕೆ ಇಲಾಖೆಯ ಯೋಜನೆಗಳ ಕುರಿತಾಗಿ ಮಾಹಿತಿಯನ್ನು ಕಚೆೇರಿ ಮುಂದೆ ನಾಮಫಲಕದಲ್ಲಿ ಅಳವಡಿಸಿ, ಇಲಾಖೆಯ ಪ್ರಮುಖ ಯೋಜನೆಗಳಾದ ಅಂಗಾಂಶ ಕೃಷಿ ಬೆಳೆ, ಪಾಲಿಹೌಸ್ ಯೋಜನೆಯ ಕುರಿತಾಗಿ ಹೆಚ್ಚಿನ ಪ್ರಚಾರ ಮಾಡಿ ರೈತರು ಉಪಯೋಗ ಮಾಡಿಕೊಳ್ಳುವಂತೆ ನೋಡಿಕೊಳ್ಳಿ ಎಂದರು.

ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಟಿಎಚ್‌ಒ ಡಾ.ಕಿಶೋರ್‌ಕುಮಾರ್ ಮತ್ತು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಸಭೆಗೆ ಮಾಹಿತಿ ನೀಡಲು ಬಂದ ವೇಳೆ ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ರಕ್ಷಾ ಸಮಿತಿಯಲ್ಲಿನ ಹಣ ದುರ್ಬಳಕೆ ಆಗಿದೆ. ಶಿವಮೊಗ್ಗ ಜಿಲ್ಲೆಯಿಂದ ಆಗಮಿಸಿ ಅಧಿಕಾರಿಗಳು ಆಡಿಟ್ ಮಾಡಿದ್ದು, ಒಂದು ಮುಕ್ಕಾಲು ಕೋಟಿ ಅವ್ಯವಹಾರ ಆಗಿರುವ ಬಗೆ ಮಾಹಿತಿ ಕೇಳಿದರು.

ಇದಕ್ಕೆ ಉತ್ತರಿಸಿದ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿ ಡಾ.ವಿ.ಮಹೇಶ್, ಹಣದ ಅವ್ಯವಹಾರ ಆಧಾರ ರಹಿತ ಆರೋಪ, ನಮ್ಮ ರಕ್ಷಾ ಸಮಿತಿಗೆ ತಿಂಗಳೊಂದಕ್ಕೆ 2ಲಕ್ಷ ರೂ. ಹಣ ಕ್ರೋಢೀಕರಣವಾಗುತ್ತದೆ. ಇದರಲ್ಲಿ ಒಂದುವರೆ ಲಕ್ಷ ರೂ.ನಷ್ಟು ಹೊರಗುತ್ತಿಗೆ ನೌಕರರಿಗೆ ವೇತನ ನೀಡಬೇಕಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಿಗೆ ಶಾಸಕ ಬಾಲಕೃಷ್ಣ , ಈ ಕುರಿತಾಗಿ ಹಣ ಖರ್ಚುವೆಚ್ಚದ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ಸದಸ್ಯರಿಗೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ಇನ್ನುಳಿದಂತೆ ಎಲ್ಲ ಅಧಿಕಾರಿಗಳನ್ನು ಶಾಸಕರು ವಹಿಸಿಕೊಳ್ಳುತ್ತಾರೆ. ಅವರು ಮಾಹಿತಿ ನೀಡುವ ವೇಳೆ ಮಧ್ಯಪ್ರವೇಶಿಸಿ ಅವರ ಪರ ನಿಲ್ಲುತ್ತಾರೆ ಎಂದು ಕೆಡಿಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್‌ಕುಮಾರ್ ಮಧ್ಯಪ್ರವೇಶಿಸಿದಾಗ ಕೆಡಿಪಿ ಸದಸ್ಯರು ಪುರಸಭಾ ಅಧ್ಯಕ್ಷರನ್ನು ಸಭೆಗೆ ಕರೆಯುವ ನಿಯಮವಿದೆಯಾ? ಇವರ‌್ಯಾಕೆ ಬಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಧ್ಯಕ್ಷನಾಗಿ ನಾನು ಆಹ್ವಾನಿಸಿದ್ದೇನೆ ಎಂದಾಗ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು. ಆಗ ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ ಅರಸೀಕೆರೆಯಲ್ಲಿ ಶಿವಲಿಂಗೇಗೌಡರು ಅಲ್ಲಿನ ನಗರಸಭೆ ಅಧ್ಯಕ್ಷರನ್ನು ಕೂರಿಸಿಕೊಂಡು ಸಭೆ ಮಾಡುತ್ತಾರೆ. ಇಲ್ಲಿ ಮಾಡಿದರೇ ಪ್ರಶ್ನೆ ಮಾಡುವ ನೀವು ಪಟ್ಟಣದ ಪ್ರಥಮ ಪ್ರಜೆಯನ್ನು ಅವಮಾನ ಮಾಡುವುದು ಸರಿಯಲ್ಲ ಎಂದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ತಹಸೀಲ್ದಾರ್ ವಿ.ಎಸ್. ನವೀನ್‌ಕುಮಾರ್, ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಆರ್.ಅನಿಲ್‌ಕುಮಾರ್, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ಬಿ.ಆರ್. ಯೋಗೀಶ್, ಕೆ.ಟಿ. ಮಹೇಶ್, ತೇಜು, ಸಮೀಉಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net