ಕೇಂದ್ರ ಸರ್ಕಾರದಿಂದ ರೈತರ ಕಡೆಗಣನೆ

ಹಕ್ಕೊತ್ತಾಯಗಳ ಮನವಿ ಪತ್ರವನ್ನು ರಾಷ್ಟ್ರಪತಿಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಮೂಲಕ ಸಲ್ಲಿಸಿದರು. ನಿರ್ವಾಣಪ್ಪ, ಎಚ್.ಜೆ.ಪ್ರಕಾಶ್, ಸಣ್ಣಪ್ಪ ಇತರರಿದ್ದರು.
ಹಕ್ಕೊತ್ತಾಯಗಳ ಮನವಿ ಪತ್ರವನ್ನು ರಾಷ್ಟ್ರಪತಿಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಮೂಲಕ ಸಲ್ಲಿಸಿದರು. ನಿರ್ವಾಣಪ್ಪ, ಎಚ್.ಜೆ.ಪ್ರಕಾಶ್, ಸಣ್ಣಪ್ಪ ಇತರರಿದ್ದರು.
Published on

ಕುಶಾಲನಗರ: ಅಖಿಲ ಭಾರತ ಯುನೈಟೆಡ್ ಕಿಸಾನ್ ಮಹಾ ಸಭಾದ ಕೊಡಗು ಸಮಿತಿ ವತಿಯಿಂದ ಕುಶಾಲನಗರದ ತಹಸೀಲ್ದಾರ್ ಕಚೇರಿ ಬಳಿ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ ಸರ್ಕಾರಗಳನ್ನು ಒತ್ತಾಯಿಸಲು ಹಕ್ಕೊತ್ತಾಯ ದಿನ ಆಚರಿಸಲಾಯಿತು.

ಕಿಸಾನ್ ಮಹಾ ಸಭಾದ ಕೇಂದ್ರ ಸಮಿತಿಯ ಪದಾಧಿಕಾರಿ ನಿರ್ವಾಣಪ್ಪ ಅವರ ನೇತೃತ್ವದಲ್ಲಿ ಗುರುವಾರ ಆಯೋಜಿಸಿದ್ದ ಹಕ್ಕೊತ್ತಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭ ಮಾತನಾಡಿದ ನಿರ್ವಾಣಪ್ಪ, ಕೇಂದ್ರದ ಬಿಜೆಪಿ ಸರ್ಕಾರ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ. ಕೃಷಿ ಕಾರ್ಮಿಕರು, ಅಸಂಘಟಿತ, ಐಸಿಡಿಎಸ್, ಮಧ್ಯಾಹ್ನದ ಊಟದ ಕಾರ್ಮಿಕರಿಗೆ ವೇತನವನ್ನು ಹೆಚ್ಚಿಸದೆ ವಂಚಿಸಲಾಗುತ್ತಿದೆ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ವಿಫಲವಾಗಿದೆ. ನಿರುದ್ಯೋಗಿ ಜನರಿಗೆ 200 ದಿನಗಳ ಕಾಲ ದಿನಕ್ಕೆ 600 ರೂ.ಗಳ ಕೂಲಿಯಂತೆ ನೀಡಲು ಮನರೇಗಾ ಯೋಜನೆಗೆ ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತ್ರಿ ಒದಗಿಸಬೇಕು. ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು. ಮನೆಯಿಲ್ಲದ ಭೂರಹಿತರಿಗೆ ಭೂಮಿ, ಹಸಿದವರಿಗೆ ಆಹಾರ, ಮನೆಯಿಲ್ಲದವರಿಗೆ ಮನೆ ಹಾಗೂ ಉದ್ಯೋಗಗಳನ್ನು ನೀಡಬೇಕೆಂಬ ಹಕ್ಕೊತ್ತಾಯಗಳ ಮನವಿ ಪತ್ರವನ್ನು ರಾಷ್ಟ್ರಪತಿಗೆ ತಹಸೀಲ್ದಾರ್ ಕಿರಣ್ ಗೌರಯ್ಯ ಮೂಲಕ ರವಾನಿಸಲಾಯಿತು.

ಕಿಸಾನ್ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ಜೆ.ಪ್ರಕಾಶ್, ಪ್ರಮುಖರಾದ ಸಣ್ಣಪ್ಪ, ಸಾವಿತ್ರಮ್ಮ, ಜವರಯ್ಯ, ಎಚ್.ಬಿ.ರಾಜು, ಚಿಣ್ಣಪ್ಪ, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net