

ಕುಂದಗೋಳ: ಕಾಂಗ್ರೆಸ್ನ ಪಂಚ ಯೋಜನೆಗಳು ಕೇವಲ ಲೋಕಸಭೆ ಚುನಾವಣೆಗೆ ಮಾತ್ರ ಮೀಸಲಾಗಿದ್ದು, ಇವುಗಳ ಜಾರಿ ನೆಪದಲ್ಲಿ ಅಭಿವೃದ್ಧಿ ಕಡೆಗಣಿಸಲಾಗಿದೆ. ಬರಗಾಲ ಛಾಯೆ ಆವರಿಸಿದ್ದರೂ ಜನರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಾಸಕ ಎಂ.ಆರ್. ಪಾಟೀಲ ಆರೋಪಿಸಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಕ್ತಿ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತಲುಪಲು ಹರಸಾಹಸ ಪಡುವಂತಾಗಿದೆ. ಗ್ರಾಮೀಣ ಭಾಗಕ್ಕೆ ಕೇವಲ ಒಂದು ಎರಡು ಬಸ್ಗಳು ಮಾತ್ರ ಬಿಡುತ್ತಿದ್ದು, ಹೆಚ್ಚು ಜನರು ಪ್ರಯಾಣಿಸುತ್ತಿರುವುದರಿಂದ ಶಾಲಾ ವಿದ್ಯಾರ್ಥಿಗಳಿಗೆ ಹತ್ತಲು ಸಹ ಅವಕಾಶ ಸಿಗದೆ, ತರಗತಿಗಳನ್ನು ತಪ್ಪಿಸುವಂತಾಗಿದೆ. ಕೂಡಲೇ ಸಾರಿಗೆ ಸೌಲಭ್ಯ ಹೆಚ್ಚಿಸಬೇಕು ಎಂದು ವಿಧಾನಸೌಧದಲ್ಲಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದರು. ಜಿಲ್ಲಾ ಬಿಜೆಪಿ ರೈತ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ರಾಘವೇಂದ್ರ ಗೌಡ ಪಾಟೀಲ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಅನೇಕ ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದನ್ನು ಕಾಂಗ್ರೆಸ್ ಸರ್ಕಾರ ಮೊಟಕುಗೊಳಿಸಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ 193 ತಾಲೂಕುಗಳಲ್ಲಿ ಬರಗಾಲ ಬಿದ್ದರೂ, ಬರಗಾಲ ಘೊಷಣೆ ಮಾಡಲು ಹಿಂದೇಟು ಹಾಕಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ರೈತ ಮೋರ್ಚಾ ತಾಲೂಕಾಧ್ಯಕ್ಷ ಚನ್ನಪ್ಪ ಹರಕುಣಿ, ಮಹಾಂತೇಶ ಶ್ಯಾಗೋಟಿ, ದಾನಪ್ಪ ಗಂಗಾಯಿ, ಸಿ.ವೈ. ಹಿರೇಗೌಡ್ರ, ಬರಮಪ್ಪ ಮುಗಳಿ, ಡಿ.ವೈ. ಲಕ್ಕನಗೌಡ್ರ, ಭರಮಗೌಡ್ರ ದ್ಯಾಮನಗೌಡ್ರ, ಇತರರಿದ್ದರು.
ಪಾದಯಾತ್ರೆ 12ರಂದು
ಕುಂದಗೋಳ ತಾಲೂಕನ್ನು ಕೂಡಲೇ ಬರಗಾಲವೆಂದು ಘೊಷಿಸಬೇಕು. ರೈತರಿಗೆ ಹೆಕ್ಟೇರ್ಗೆ 50 ಸಾವಿರ ರೂಪಾಯಿ ಪರಿಹಾರ ಧನ ಹಾಗೂ ಗೋಶಾಲೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸೆ. 12ರಂದು ಪಟ್ಟಣದ ಗಾಳಿಮರೆಮ್ಮ ದೇವಸ್ಥಾನದಿಂದ ನೂರಾರು ರೈತರು ಪಾದಯಾತ್ರೆ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಗುವುದು ಎಂದು ರಾಘವೇಂದ್ರ ಗೌಡ ಪಾಟೀಲ ತಿಳಿಸಿದರು.