ಕರೊನಾ ಸೋಂಕಿತರ ನಿರ್ಲಕ್ಷ್ಯ ಸಲ್ಲ; ಸಂಸದ ಸುರೇಶ್ ಅಭಿಮತ; ಮಂಟಪ ಗ್ರಾಪಂನಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

24ank news and photos 01(1)
Published on

ಆನೇಕಲ್: ರಾಜ್ಯ ಸರ್ಕಾರ ಕರೊನಾ ಸೋಂಕಿತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಮಂಟಪ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕರೊನಾ ಆರ್ಭಟ ಹೆಚ್ಚಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರೊನಾ ಓಡಿಸಬೇಕಾದರೆ ನಮ್ಮನ್ನು ನಾವು ಸುರಕ್ಷಿತರನ್ನಾಗಿ ಮಾಡಿಕೊಳ್ಳಬೇಕು. ಹೊರಗೆ ಓಡಾಡುವ ಹೆಚ್ಚಿನವರಿಗೆ ಕರೊನಾ ಹರಡುತ್ತಿದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಬೇಕು. ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕರೊನಾ ಸೋಂಕಿತರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಸ್ವಯಂ ರಕ್ಷಣೆಗೆ ಆದ್ಯತೆ ನೀಡುವುದು ಉತ್ತಮ ಎಂದರು.

ಸೋಂಕಿತರಿಗೆ ಸರ್ಕಾರ ನೀಡುವ ಊಟ ಕಳಪೆಯಾಗಿದೆ. ಮಾನವೀಯತೆ ದೃಷ್ಟಿಯಿಂದಾದರೂ ರುಚಿಕರ ಊಟ ನೀಡಬೇಕು ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸರ್ಕಾರ ಪ್ರತಿ ಪಕ್ಷವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅವರ ಸಲಹೆ ಹಾಗೂ ಸೂಚನೆ ಪಡೆದು ಕರೊನಾ ಹಿಮ್ಮೆಟ್ಟಿಸಲು ಬೇಕಾದ ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್ ತೆರವಿನಿಂದ ಕರೊನಾ ಹೆಚ್ಚಾಗುತ್ತಿದೆ ಎಂದರು.

ದೇಶದಲ್ಲಿ 4 ಲಕ್ಷಕ್ಕಿಂತಲೂ ಹೆಚ್ಚು ಸೋಂಕಿತರಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 1500 ಕ್ಕಿಂತಲೂ ಹೆಚ್ಚು ಸೋಂಕಿತರಿದ್ದಾರೆ. ರಾಜ್ಯದಲ್ಲಿ 10 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳಿವೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಮಂಟಪ ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಐದು ವರ್ಷದಲ್ಲಿ ಮಂಟಪ ಗ್ರಾಪಂನಿಂದ ಹಲವಾರು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಜನರ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ, ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ಪಿ. ನರೇಂದ್ರಬಾಬು, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಕೇಶವ ರೆಡ್ಡಿ, ಹಾಪ್ ಕಾಮ್ಸ್ ಅಧ್ಯಕ್ಷ ನರೇಂದ್ರಬಾಬು, ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಅಚ್ಚುತ ರಾಜು, ಮುಖಂಡರಾದ ಎನ್‌ಬಿಐ ನಾಗರಾಜು, ಕೆ.ಎಸ್.ನಟರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net