

| ಗಿರೀಶ್ ಗರಗ, ಬೆಂಗಳೂರು
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಂಗಳೂರು ದಕ್ಷಿಣ ವಿಭಾಗ, ಅದರಲ್ಲೂ ಜಯನಗರ ಪ್ರದೇಶದಲ್ಲಿ ಕರೊನಾ ಭೀತಿ ಎದುರಾಗಿದೆ.
ವಿಕ್ಟೋರಿಯಾ ಕೋವಿಡ್- 19 ಆಸ್ಪತ್ರೆಯ ಐಸೋ ಲೇಟೆಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಮಾನಸಿಕ ಖಿನ್ನತೆಯಿಂದಾಗಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಜಯನಗರ ಬಿಟಿಬಿ ಪ್ರದೇಶದಲ್ಲಿನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅದಾದ ನಂತರ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರು ಧರಿಸಿದ್ದ ‘ಪರ್ಸ್ನಲ್ ಪ್ರೊಟೆಕ್ಟಿವ್ ಎಕ್ವಿಪ್ವೆುಂಟ್’ಗಳನ್ನು (ಪಿಪಿಇ) ಭೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆಯಲಾಗಿದ್ದು, ಆ ಭಾಗದ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.
ಕೇಂದ್ರ ಸರ್ಕಾರದ ನಿಯಮದಂತೆ ಸೋಂಕಿತರ ಮೃತದೇಹವನ್ನು ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತದ ಸೂಚನೆಯಂತೆ ಸಂಸ್ಕಾರ ಮಾಡಬೇಕು.
ಕೆಲ ಧಾರ್ವಿುಕ ವಿಧಾನಗಳನ್ನಷ್ಟೇ ನೆರವೇರಿಸಬೇಕು ಮತ್ತು ಕುಟುಂಬದವರನ್ನು ಹತ್ತಿರ ಸೇರಿಸಬಾರದು. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿ ಪಿಪಿಇ ಧರಿಸಿ ಸೋಂಕು ತಗುಲದಂತೆ ಸುರಕ್ಷಿತರಾಗಿರಬೇಕು. ಅಂತ್ಯಸಂಸ್ಕಾರದ ನಂತರ ಪಿಪಿಇಗಳನ್ನು ನಿಗದಿತ ಏಜೆನ್ಸಿಗಳಿಗೆ ನೀಡಿ ಅದನ್ನು ಸುಡುವ ಮೂಲಕ ವಿಲೇವಾರಿ ಮಾಡಬೇಕು.
ನಿಯಮ ಉಲ್ಲಂಘನೆ: ಇಷ್ಟು ನಿಯಮಗಳಿದ್ದರೂ ಬಿಬಿಎಂಪಿ ಸಿಬ್ಬಂದಿ ಅಧಿಕಾರಿಗಳ ಸೂಚನೆ ಮೇರೆಗೆ ಆತ್ಮಹತ್ಯೆ ಮಾಡಿಕೊಂಡ ಸೋಂಕಿತನ ಅಂತ್ಯಸಂಸ್ಕಾರದ ನಂತರ ತಾವು ಧರಿಸಿದ್ದ ಪಿಪಿಇಗಳನ್ನು ಬೈರಸಂದ್ರ ಕೆರೆ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಸೋಮವಾರ ಅಂತ್ಯಸಂಸ್ಕಾರವಾಗಿದ್ದು, ಬುಧವಾರ ಸಂಜೆವರೆಗೆ ಪಿಪಿಇ ಸೇರಿ ಇತರ ವಸ್ತುಗಳು ಅಲ್ಲಿಯೇ ಬಿದ್ದಿದ್ದವು.
ಸ್ಥಳೀಯರಲ್ಲಿ ಆತಂಕ: ಸೋಂಕಿತನ ಸಂಪರ್ಕದಲ್ಲಿದ್ದವರು ಧರಿಸಿದ್ದ ಪಿಪಿಇ ಜನವಸತಿ ಪ್ರದೇಶದಲ್ಲಿ ಬಿದ್ದಿರುವುದನ್ನು ಗಮನಿಸಿದ ಜನರು ಕಳೆದೆರಡು ದಿನಗಳಿಂದ ಆತಂಕಕ್ಕೊಳಗಾಗಿದ್ದಾರೆ. ವಿಷಯ ತಿಳಿದವರು ಎರಡು ದಿನಗಳಿಂದ ಮನೆಯಿಂದ ಹೊರಬರದೆ ಸ್ವಯಂ ಗೃಹಬಂಧನಕ್ಕೊಳಗಾಗಿದ್ದಾರೆ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.
ನಿವಾಸಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬುಧವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಪಿಪಿಇಗಳ ಮೇಲೆ ಪೆಟ್ರೋಲ್ ಸುರಿದು ಸುಟ್ಟಿದ್ದಾರೆ. ನಂತರ ಆ ಪ್ರದೇಶದಲ್ಲಿ ಔಷಧ ಸಿಂಪಡಿಸಿದ್ದಾರೆ.
ಪ್ರಕರಣದಲ್ಲಿ ಜಂಟಿ ಆಯುಕ್ತರ ನಿರ್ಲಕ್ಷ್ಯ ಸ್ಪಷ್ಟವಾಗಿದೆ. ಯಾವುದೇ ಪಿಪಿಇಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಸುವುದು ಜಂಟಿ ಆಯುಕ್ತರ ಹೊಣೆ. ಅಲ್ಲದೆ, ಬಿಬಿಎಂಪಿ ಪಿಪಿಇಗಳ ವಿಲೇಗಾಗಿಯೇ 2 ವಲಯಕ್ಕೊಂದರಂತೆ 4 ಏಜೆನ್ಸಿಗಳನ್ನು ನಿಗದಿಪಡಿಸಿದೆ. ಅಂತ್ಯಸಂಸ್ಕಾರವಾದ ಕೂಡಲೇ ಸಿಬ್ಬಂದಿ ಬಳಸಿದ್ದ ಪಿಪಿಇಗಳ ವಿಲೇವಾರಿಗೆ ಜಂಟಿ ಆಯುಕ್ತರು ಏಜೆನ್ಸಿಗಳಿಗೆ ತಿಳಿಸಬೇಕಿತ್ತು. ಆದರೆ, ಅದನ್ನು ಮಾಡಿಸದೆ ಜನರು ಕರೊನಾ ಸೋಂಕಿತ ಭೀತಿ ಎದುರಿಸುವಂತಾಗಿದೆ.
ನಮ್ಮ ಗಮನಕ್ಕೆ ಬಂದಿಲ್ಲ. ಈ ಕುರಿತು ಮೊದಲೇ ತಿಳಿಸಿದ್ದರೆ ನಿಗದಿತ ಏಜೆನ್ಸಿಗಳ ಮೂಲಕ ಪಿಪಿಇಗಳನ್ನು ನಿಯಮದಂತೆ ವಿಲೇವಾರಿ ಮಾಡುತ್ತಿದ್ದೆವು. ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. | ರಂದೀಪ್ ಬಿಬಿಎಂಪಿ ವಿಶೇಷ ಆಯುಕ್ತ
ಸೋಂಕಿತನ ಸಂಪರ್ಕದಲ್ಲಿದ್ದವರು ಧರಿಸಿದ್ದ ಪಿಪಿಇಗಳನ್ನು ಜನವಸತಿ ಪ್ರದೇಶದಲ್ಲಿ ಎಸೆಯಲು ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.