ಬದುಕು ಬಂಗಾರವಾಗಿಸಿದ ಬಾಳೆ

Oplus_16908288
Oplus_16908288
Published on

ನಂಜನಗೂಡು: ತಾಲೂಕಿನ ಹೊಸಕೋಟೆ ಗ್ರಾಮದ ಎಸ್.ಪ್ರಭುಸ್ವಾಮಿ ಕೃಷಿ, ಹೈನುಗಾರಿಕೆ ಹಾಗೂ ಕಿರು ಉತ್ಪನ್ನ ತಯಾರಿಕೆ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. 7 ಎಕರೆ ಜಮೀನಿನಲ್ಲಿ ನಂಜನಗೂಡು ರಸಬಾಳೆ, ಏಲಕ್ಕಿ ಬಾಳೆ, ನೇಂದ್ರ ಬಾಳೆ, ಪಚ್ಚ ಬಾಳೆ, ಚಂದ್ರ ಬಾಳೆ, ಹೂ ಬಾಳೆ, ಕಬ್ಬು, ರೇಷ್ಮೆ ಸಾಕಣೆ, ತೆಂಗಿನ ಮರ, ಹಸು, ಮೇಕೆ, ಮೊಲ ಸಾಕಣೆ ಮಾಡುತ್ತಿದ್ದಾರೆ.

ಬಾಳೆ ಬೆಳೆಯಿಂದ 5 ಲಕ್ಷ ರೂ., ತೆಂಗು 4 ಲಕ್ಷ ರೂ., ಎರೆಹುಳು ಗೊಬ್ಬರ ಮಾರಾಟದಿಂದ 2.5 ಲಕ್ಷ ರೂ., ಎರೆಜಲ ಮಾರಾಟದಿಂದ 2 ಲಕ್ಷ ರೂ., ಮೇಕೆಗಳ ಮಾರಾಟದಿಂದ 3 ಲಕ್ಷ ರೂ., ಕಬ್ಬಿನ ಮಾರಾಟದಿಂದ ಮೂರು ಲಕ್ಷ ರೂ., ಹಸು ಸಾಕಣೆ ಉತ್ಪನ್ನಗಳಿಂದ 2 ಲಕ್ಷ ರೂ., ರೇಷ್ಮೆ ಸಾಕಣೆಯಿಂದ 3 ಲಕ್ಷ ರೂ. ಸೇರಿ ವಾರ್ಷಿಕವಾಗಿ ಸುಮಾರು 20 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಪ್ರಭುಸ್ವಾಮಿ ತಮ್ಮ 7 ಎಕರೆ ಜಮೀನಿಗೂ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡುತ್ತಿಲ್ಲ. ಬದಲಿಗೆ ಎರೆಹುಳು ತೊಟ್ಟಿ, ಎರೆಜಲ, ಕೊಟ್ಟಿಗೆ ಗೊಬ್ಬರ, ಗೋ ಕೃಪಾಮೃತ ಬಳಕೆ ಮಾಡಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗಳ ನಿರ್ವಹಣೆಗೆ ಬೋರ್‌ವೆಲ್ ಕೊರೆಸಿದ್ದು, ಹನಿ ನೀರಾವರಿ ಪದ್ಧತಿಯ ಮೂಲಕ ನೀರು ಮತ್ತು ಗೊಬ್ಬರಗಳನ್ನು ನೇರವಾಗಿ ಪೂರೈಕೆ ಮಾಡುತ್ತಿದ್ದಾರೆ.

ಮಿಶ್ರ ತಳಿ ರಾಸುಗಳನ್ನು ಸಾಕಣೆ ಮಾಡದೆ ಭಾರತದಲ್ಲಿ ಅವನತಿ ಹಾದಿಯಲ್ಲಿರುವ ಸ್ವದೇಶಿ ಹಸುಗಳಾದ ಮಲ್ನಾಡ್ ಗಿಡ್ಡ, ಗಂಗಾ ತೀರದ ಹಸು, ಸಾಯಿ ವಾಲು, ಬುಲ್ ತಳಿಗಳನ್ನು ಸಾಕುತ್ತಿದ್ದು, ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ ತಯಾರಿಸಿ ಮಾರುತ್ತಿದ್ದಾರೆ. ಜತೆಗೆ, ಹಲ್ಲು ಪುಡಿ, ಧೂಪದ ಬತ್ತಿ, ವಿಭೂತಿ ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ.

ಪ್ರಭುಸ್ವಾಮಿ ಮನೆ ಬಳಕೆಗೆ ಜಮೀನಿನಲ್ಲಿ ಹಣ್ಣು, ತರಕಾರಿ, ಭತ್ತ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದು, ಮಾರುಕಟ್ಟೆಯಿಂದ ಖರೀದಿ ಮಾಡುವುದನ್ನು ತಪ್ಪಿಸಿದ್ದಾರೆ. ಜತೆಗೆ ಜಮೀನಿನಲ್ಲಿ ಪ್ರಸ್ತುತ ಮೊಲ ಸಾಕಣೆ, ಮೀನು ಸಾಕಣೆ, ಅಜೋಲಾ ಗುಂಡಿ, ಹೆಬ್ಬೇವು, ಮಾವು, ಸಪೋಟ, ಹಲಸು, ಪಪ್ಪಾಯಿ, ನುಗ್ಗೆ ಬೆಳೆಯುತ್ತಿದ್ದಾರೆ. ತೆಂಗಿನ ಕಾಯಿಗಳನ್ನು ಮಾರಾಟ ಮಾಡದೆ ಕೊಬ್ಬರಿ ಎಣ್ಣೆ ತಯಾರು ಮಾಡಿ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನ ಹೊಸಕೋಟೆ ಗ್ರಾಮದಲ್ಲಿರುವ ರೈತ ಪ್ರಭುಸ್ವಾಮಿ ಕೃಷಿ ಜತೆಗೆ ಕಡಿಮೆ ಬಂಡವಾಳವನ್ನು ಹಾಕಿ ಹೆಚ್ಚು ಆದಾಯ ಗಳಿಸುತ್ತಿದ್ದು, ಸಕಲಕಲಾ ವಲ್ಲಭರಾಗಿ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net