ಉದ್ಯೋಗ ಬಿಟ್ಟು ಕೃಷಿಯಲ್ಲಿ ಯಶಸ್ಸು

5blrp1.
Published on

ಬೇಲೂರು: ಸಮಗ್ರ ಸಾವಯವ ತೋಟಗಾರಿಕಾ ಕೃಷಿಯೊಂದಿಗೆ ಯಶಸ್ಸು ಸಾಧಿಸಿ ವಾರ್ಷಿಕವಾಗಿ ಲಕ್ಷಾಂತರ ರೂ. ಆದಾಯ ಗಳಿಸುತ್ತಿರುವ ತಾಲೂಕಿನ ಗಂಗಾವರ-ಕೌರಿ ಗ್ರಾಮದ ಬಿ.ವಿ.ಸತೀಶ್ ಇಂದಿನ ಯುವ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ಬೇಲೂರು ತಾಲೂಕಿನ ಕೊರಟಿಕೆರೆ ಗ್ರಾಮದ ಯೋಗೇಂದ್ರ-ಶಾಂತಮ್ಮ ದಂಪತಿ ಪುತ್ರ ಬಿ.ವಿ.ಸತೀಶ್, ಬ್ಯಾಂಕಿನಲ್ಲಿ ಕೆಲಸ ಮಾಡಲು ಮನಸೊಪ್ಪದೆ ವಿಆರ್‌ಎಸ್ ಪಡೆದು ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ತಮ್ಮ ಹುಟ್ಟೂರಾದ ಕೊರಟಿಕೆರೆಯಲ್ಲಿರುವ 2 ಎಕರೆ ಜಮೀನು ಹಾಗೂ ಅರೇಹಳ್ಳಿ ಹೋಬಳಿಯ ಗಂಗಾವರ-ಕೌರಿ ಗ್ರಾಮದ ಗೌರಿಶಂಕರ ಎಸ್ಟೇಟಿನಲ್ಲಿರುವ 10 ಎಕರೆ ತೋಟದಲ್ಲಿ 5000 ಅಡಕೆ ಬೆಳೆದು, ಇದರೊಂದಿಗೆ ಅಂತರ ಬೆಳೆಯಾಗಿ 6000 ಅರೇಬಿಕ ಮತ್ತು ರೋಬಾಸ್ಟ ಕಾಫಿ, 200 ಕಾಳು ಮೆಣಸನ್ನೂ ಬೆಳೆದಿದ್ದಾರೆ.

ತೋಟದ ಸುತ್ತಲೂ 100ಕ್ಕೂ ಹೆಚ್ಚಿನ ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಅರಣ್ಯ ಕೃಷಿ ಮಾದರಿಯಲ್ಲಿ 4000 ಸಿಲ್ವರ್, 150 ಅಗರ್‌ವುಡ್, 600 ಬಾಳೆ, 20 ಮಾವು, 12 ಹಲಸು, 10 ನೇರಳೆ, 10 ನುಗ್ಗೆ, 5 ಬೆಟ್ಟದ ನೆಲ್ಲಿ, 10 ವೆನಿಲ್ಲಾ, 100 ಏಲಕ್ಕಿ. 10 ಚಕ್ಕೆ, 10 ಲವಂಗ, 20 ದಾಲ್ಚಿನ್ನಿ, 25 ಸೀಬೆ, ಮನೆ ಸಮೀಪ ಕಬ್ಬು, 10 ನಿಂಬೆ, 10 ಹೇರಳೆ ಕಾಯಿ ಗಿಡ, 50 ಕಿತ್ತಳೆ, ಬಟರ್ ಫ್ರೂಟ್ 12 ಹಾಗೂ 150ಕ್ಕೂ ಹೆಚ್ಚು ಕಾಡು ಜಾತಿಯ ಗಿಡ ಮರಗಳನ್ನು ಬೆಳೆಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಕಸಬಾ ಹೋಬಳಿಯ ಕೊರಟಿಕೆರೆ ಗ್ರಾಮದ ತಮ್ಮ ಜಮೀನಿನಲ್ಲಿ ರಾಗಿ, ಮುಸುಕಿನ ಜೋಳ, ಆಲೂಗಡ್ಡೆ, ಶುಂಠಿ ಹಾಗೂ ವಿವಿಧ ತರಕಾರಿ ಬೆಳೆ ಬೆಳೆದು ಅಲ್ಲಿಯೂ ಹೆಚ್ಚಿನ ಲಾಭ ಗಳಿಸುತಿದ್ದಾರೆ.

ಈ ಯುವ ರೈತ ಬಿ.ವಿ.ಸತೀಶ್ ರಾಸಾಯನಿಕ ಗೊಬ್ಬರದೊಂದಿಗೆ ಸಾವಯವ ಕೃಷಿಯಲ್ಲೂ ತೊಡಗಿದ್ದಾರೆ. ಗ್ರಾಮದಲ್ಲಿ ಸಿಗುವ ಜಾನುವಾರುಗಳ ಗೊಬ್ಬರ ತಂದು ಅಡಕೆ, ತೆಂಗು ಹಾಗೂ ವಿವಿಧ ಬೆಳೆ ಬೆಳೆಯಲು ಬಳಸುತ್ತಿದ್ದಾರೆ. ಕೊಳವೆ ಬಾವಿಯಿಂದ ತೋಟ, ಜಮೀನಿನಲ್ಲಿರುವ ಗಿಡಗಳಿಗೆ ನೀರುಣಿಸಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಕೃಷಿಯ ಜತೆಯಲ್ಲೇ ತರಬೇತಿ ಪಡೆದು ಸ್ವಂತ ಡ್ರೋನ್ ಇಟ್ಟುಕೊಂಡಿದ್ದಾರೆ. ತಮ್ಮ ಜಮೀನು ಸೇರಿದಂತೆ ತಾಲೂಕಿನ ಬೇರೆ ಭಾಗದಲ್ಲಿ ರೈತರು ಬೆಳೆದಿರುವ ಭತ್ತ, ರಾಗಿ, ಜೋಳ, ಅಡಕೆ, ತೆಂಗು ಸೇರಿದಂತೆ ತರಕಾರಿ ಬೆಳೆಗೆ ರೋಗ ಕಾಣಿಸಿಕೊಂಡ ಸಂದರ್ಭ ಡ್ರೋನ್ ಮೂಲಕ ಔಷಧ ಸಿಂಪಡಿಸಿ ರೈತರಿಗೆ ಸಹಕಾರ ನೀಡಿ ಅದರಲ್ಲೂ ಆದಾಯ ಗಳಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net