ಸಾವಯವ ಕೃಷಿಯಲ್ಲಿ ಲಾಭ ಕಂಡ ರೈತ

oppo_2
oppo_2
Published on

ಮದ್ದೂರು: ಸಾವಯವ ಕೃಷಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆ ಲಭಿಸುತ್ತದೆ. ಅದರ ಜನರ ಆರೋಗ್ಯವೂ ಸುಧಾರಿಸುತ್ತದೆ ಎಂಬ ಆಶಯದೊಂದಿಗೆ ರೈತನೊಬ್ಬ ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ.

ತಾಲೂಕಿನ ಗೆಜ್ಜಲಗೆರೆ ಗ್ರಾಮದ ಮಾದಪ್ಪ ಅವರ ಪುತ್ರ ಸಿ.ಎಂ.ಸಿದ್ದರಾಜು ಸಾವಯವ ಕೃಷಿ ಮೂಲಕ ಮಾದರಿಯಾಗಿದ್ದಾರೆ. ಸುಮಾರು 6 ಎಕರೆ ಜಮೀನಿದ್ದು ಕಬ್ಬು, ಭತ್ತ, ತೆಂಗು, ಬಾಳೆ, ತೇಗದ ಮರಗಳನ್ನು ಬೆಳೆದಿದ್ದಾರೆ. ಜತೆಗೆ 50 ನಾಟಿ ಕೋಳಿಗಳು, ಆಡು 10, ಕುರಿ 5 ನಾಟಿ ಹಸು 2 ಹಾಗೂ 4 ಎಚ್‌ಎಫ್ ಹಸುಗಳನ್ನು ಸಾಕುತ್ತಿದ್ದಾರೆ. ಕೆಂಪು ಸಣ್ಣ, ಗೌರಿ ಸಣ್ಣ ಹಾಗೂ ಪ್ರಪಂಚ ಸಣ್ಣ ಎಂಬ ಭತ್ತ ಬೆಳೆಯುತ್ತಿದ್ದಾರೆ.

ದೇಶಿ ಆಕಳ ಸಗಣಿ, ಗಂಜಲ, ಕಪ್ಪು ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಬದುವಿನ ಮಣ್ಣು, ನೀರಿನಿಂದ ಜೀವಾಮೃತ ತಯಾರಿಸಿ ಭೂಮಿಗೆ ಹಾಕುವುದರಿಂದ ಫಲವತ್ತೆ ಹೆಚ್ಚುತ್ತದೆ ಎನ್ನುತ್ತಾರೆ ರೈತ ಸಿದ್ದರಾಜು. ಇವರ ಕೃಷಿ ಪ್ರೀತಿಗೆ ಪತ್ನಿ ಜಿ.ಸಿ.ಶೋಭಾ, ಪುತ್ರರಾದ ಜಿ.ಎಸ್.ಯಶವಂತ್‌ಗೌಡ, ಜಿ.ಎಸ್.ಮಧುಗೌಡ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಂಬಾರ್ ಪದಾರ್ಥಗಳು, ಹಣ್ಣು, ತರಕಾರಿ ಹಾಗೂ ಸೊಪ್ಪು ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುವ ಉದ್ದೇಶ ಹೊಂದಿದ್ದಾರೆ.

ಬೆಳೆ ಬೆಳೆಯಲು ವಿಶ್ವೇಶ್ವರಯ್ಯ ನಾಲೆಯಿಂದ ನೀರು ಬರುತ್ತಿರುವುದರಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ಎರಡು ಬೋರ್‌ವೆಲ್ ಕೊರೆಸಿದ್ದಾರೆ. ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಂಡಿರುವುದರಿಂದ ನೀರಿನ ಸಮಸ್ಯೆಯಿಲ್ಲ. ಇವರ ಕುಟುಂಬದವರೇ ಬೇಸಾಯ ಮಾಡುವುದರಿಂದ ಕಾರ್ಮಿಕರ ಸಮಸ್ಯೆ ಇವರನ್ನು ಬಾಧಿಸುತ್ತಿಲ್ಲ. ಸುಮಾರು ಐದು ವರ್ಷಗಳಿಂದ ಸಾವಯವ ಗೊಬ್ಬರವನ್ನು ಬಳಕೆ ಮಾಡಿಕೊಂಡು ಬರುತ್ತಿದ್ದು, ಇದರಿಂದ ವರ್ಷಕ್ಕೆ ಕನಿಷ್ಠ 10 ಲಕ್ಷ ರೂ. ಲಾಭವನ್ನು ಕಾಣುತ್ತಿದ್ದಾರೆ. ಎಲ್ಲರೂ ಸಾವಯವ ಗೊಬ್ಬರವನ್ನೇ ಬಳಸಬೇಕು ಹಾಗೂ ಹಳೆಯ ಪದ್ಧತಿಯನ್ನೇ ಅಳವಡಿಸಿಕೊಂಡರೆ ರೈತರಿಗೆ ಯಾವುದೇ ರೀತಿಯ ನಷ್ಟ ಇಲ್ಲ ಎಂಬುದು ರೈತ ಸಿದ್ದರಾಜು ಅವರ ಬಲವಾದ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net