

ಪಿರಿಯಾಪಟ್ಟಣ: ಮಿಶ್ರ ಬೆಳೆ ಬೇಸಾಯ ಪದ್ಧತಿ ಮೂಲಕ ಆರ್ಥಿಕವಾಗಿ ಸದೃಢತೆ ಹೊಂದಬಹುದು ಎಂಬುದಕ್ಕೆ ತಾಲೂಕಿನ ಬೆಟ್ಟದಪುರ ಸಮೀಪದ ಕಗ್ಗಲಿಕೊಪ್ಪಲು ಗ್ರಾಮದ ಪ್ರಗತಿಪರ ಕೃಷಿಕ ರಮೇಶ್ ಕುಟುಂಬ ಉದಾಹರಣೆಯಾಗಿದೆ.
ಅಪ್ಪ ತಮ್ಮೇಗೌಡ, ಚಿಕ್ಕಪ್ಪ ಶಿವಣ್ಣೇಗೌಡ, ಸಹೋದರರಾದ ರಾಜೇಶ್, ರವೀಶ್ ಜತೆ ಕೂಡು ಕುಟುಂಬ ನಡೆಸುತ್ತಿರುವ ರಮೇಶ್, ಹೊಸ ಹೊಸ ತಳಿಗಳನ್ನು ತಮ್ಮ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ಸು ಪಡೆದಿದ್ದಾರೆ. ಕಗ್ಗಲಿಕೊಪ್ಪಲು ತಮ್ಮೇಗೌಡ-ನಾಗಮ್ಮ ದಂಪತಿ ಹಿರಿಯ ಪುತ್ರ ರಮೇಶ್ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ. ತಂದೆ ಮತ್ತು ಚಿಕ್ಕಪ್ಪನೊಂದಿಗೆ ಕೃಷಿಯಲ್ಲಿ ಕೈಜೋಡಿಸಿ ಬಂಜರು ಭೂಮಿಯಂತಿದ್ದ ಜಮೀನನ್ನು ಫಲವತ್ತಾಗಿಸಿದ್ದಾರೆ.
ತಂಬಾಕು ಮತ್ತು ರಾಗಿ ಜೋಳದ ಬೆಳೆಗೆ ಸೀಮಿತವಾಗಿದ್ದ ತಮ್ಮ 8 ಎಕರೆ ಕಲ್ಲು ಮಿಶ್ರಿತ ಜಮೀನಿನಲ್ಲಿ ಹಂತ ಹಂತವಾಗಿ ಅರಿಶಿಣ, ಶುಂಠಿ, ತೆಂಗು, ಅಡಕೆ ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಲಾಭದ ದಾರಿ ಕಂಡುಕೊಂಡಿದ್ದಾರೆ. ಜಮೀನಿನಲ್ಲಿ ಸಂಪಾದಿಸಿದ ಹಣವನ್ನು ದುಂದು ವೆಚ್ಚ ಮಾಡದೆ ತಮ್ಮ ಅಕ್ಕಪಕ್ಕದ ಜಮೀನುಗಳನ್ನು ಖರೀದಿಸುವ ಮೂಲಕ ಇದೀಗ 17 ಎಕರೆ ಜಮೀನಿನ ಮಾಲೀಕರಾಗಿದ್ದಾರೆ.
ಅಧಿಕೃತ ತಂಬಾಕು ಬೆಳೆಗಾರರಾಗಿರುವ ಅವರು ತಂಬಾಕು ಮಂಡಳಿಯಿಂದ ಡಬಲ್ ಬ್ಯಾರೆನ್‌ನ 4 ತಂಬಾಕು ಲೈಸೆನ್ಸ್ ಹೊಂದಿದ್ದು, ಪ್ರತಿ ವರ್ಷ ಹತ್ತು ಸಾವಿರ ಕೆಜಿಗೂ ಹೆಚ್ಚು ತಂಬಾಕು ಉತ್ಪಾದಿಸುತ್ತಾರೆ. ಕಳೆದ ಸಾಲಿನಲ್ಲಿ ಇವರಿಗೆ ಪ್ರತಿ ಕೆಜಿಗೆ ಸರಾಸರಿ 240 ರೂ. ದರ ದೊರೆತಿದ್ದು, ಸುಮಾರು 25 ಲಕ್ಷ ರೂ. ಗಳಿಸಿದ್ದಾರೆ. ಆದರೆ ಪ್ರಸಕ್ತ ವರ್ಷದಲ್ಲಿ ಮಳೆ ಹೆಚ್ಚಳದಿಂದ ಇಳುವರಿಯಲ್ಲಿ ಅಲ್ಪ ಕುಸಿತವಾಗಿದ್ದು, ಹೆಚ್ಚಿನ ದರ ದೊರೆತರೆ ನಷ್ಟವಾಗುವುದಿಲ್ಲ ವಿಶ್ವಾಸದಲ್ಲಿದ್ದಾರೆ.
ಪ್ರತಿ ವರ್ಷ 3 ಎಕರೆಯನ್ನು ಶುಂಠಿಗೆ ಮೀಸಲಿಟ್ಟಿದ್ದು, ಸುಧಾರಿತ ಬೇಸಾಯ ಪದ್ಧತಿಗಳನ್ನು ಅನುಸರಿಸುವ ಮೂಲಕ ಗುಣಮಟ್ಟದ ಶುಂಠಿ ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ವರ್ಷ ಮೂರು ಎಕರೆಯಲ್ಲಿ ಸುಮಾರು 800 ಚೀಲ(ಪ್ರತಿ ಚೀಲ 60 ಕೆಜಿ)ಶುಂಠಿ ಉತ್ಪಾದನೆಯಾಗಿದ್ದು, 35 ರಿಂದ 40 ಲಕ್ಷ ರೂ. ಆದಾಯ ಪಡೆದಿದ್ದಾರೆ. ತಂಬಾಕು ಬೆಳೆ ಪಡೆದ ನಂತರ ಆ ಜಮೀನಿನಲ್ಲಿ ಮೆಣಸಿನಕಾಯಿ, ಮುಸುಕಿನಜೋಳ, ರಾಗಿ, ಹೆಸರು, ಉದ್ದು, ಕಡಲೆಕಾಳು, ಸೋಯಾಬಿನ್, ಅಲಸಂದೆ, ಅವರೆಕಾಯಿ ಸೇರಿದಂತೆ ಮಿಶ್ರ ಬೆಳೆ ಬೇಸಾಯ ಪದ್ಧತಿ ಅನುಸರಿಸುವ ಮೂಲಕ ಉತ್ತಮ ಲಾಭ ಕಾಣುತ್ತಿದ್ದಾರೆ.
ಮನೆಯ ಬಳಿ ಇರುವ 7 ಎಕರೆಯಲ್ಲಿ ಒಂದೂವರೆ ಎಕರೆ ಅಡಕೆ, ಎರಡೂವರೆ ಎಕರೆ ತೆಂಗು, 3 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದು, ಪ್ರತಿ ವರ್ಷ 100 ಕ್ವಿಂಟಾಲ್ ಭತ್ತದ ಇಳುವರಿ ಪಡೆಯುತ್ತಿದ್ದಾರೆ. ಭತ್ತದ ಗದ್ದೆಗೆ ಪ್ರತಿ ವರ್ಷ ಸೆಣಬಿನ ಬೀಜ ಉದುರಿಸಿ ಹಸಿರೆಲೆಯಿಂದ ಭೂಮಿಯ ಫಲವತ್ತತೆ ಹೆಚ್ಚಿಸುತ್ತಿದ್ದಾರೆ. ಎಳನೀರು, ತೆಂಗು ಮಾರಾಟದಿಂದ ಪ್ರತಿ ವರ್ಷ ಸುಮಾರು 2 ಲಕ್ಷ ರೂ. ಆದಾಯ ಬರುತ್ತಿದೆ. ಅಡಕೆ ಮತ್ತು ತೆಂಗು ನಡುವೆ ಕುಂಬಳಕಾಯಿ ಬೆಳೆಯಲಾಗಿದೆ. ಮನೆ ಬಳಿ ಶೆಡ್ ನಿರ್ಮಿಸಿ 30ಕ್ಕೂ ಹೆಚ್ಚು ಕುರಿ, ಒಂದು ಜೊತೆ ಹಳ್ಳಿಕಾರ್ ಸಾಕಿದ್ದಾರೆ.
ಕೃಷಿ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಇವರ ಜಮೀನಿನಲ್ಲಿ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಂಡು ಹೊಸ ಬಿತ್ತನೆ ಬೀಜಗಳನ್ನು ರೈತರಿಗೆ ಪರಿಚಯಿಸಿದ್ದಾರೆ. ಕೆಲ ಬಿತ್ತನೆ ಬೀಜ ಮಾರಾಟದ ಕಂಪನಿಗಳು ಹೊಸ ತಳಿಗಳನ್ನು ಇವರ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಿ ಗುಣಮಟ್ಟ ಮತ್ತು ಇಳುವರಿ ಪರೀಕ್ಷೆ ಮಾಡುತ್ತಿದ್ದಾರೆ. ಎರಡು ಬಾರಿ ಉತ್ತಮ ತಂಬಾಕು ಬೆಳೆಗಾರ ಪ್ರಶಸ್ತಿಯೂ ಕುಟುಂಬಕ್ಕೆ ದೊರಕಿದೆ.