ಸಾಮಾಜಿಕ ಜಾಲತಾಣಗಳಿಂದ ಋಣಾತ್ಮಕ ಪರಿಣಾಮ

nrp menta
ಎನ್.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಕೆ.ಅರ್ಚನಾ ಭಟ್ ಮಾತನಾಡಿದರು. ಡಾ. ಧನಂಜಯ, ದಿನಕರ ಇದ್ದರು.
Published on

ಎನ್.ಆರ್.ಪುರ: ಯುವ ಜನರು ಸಾಮಾಜಿಕ ಜಾಲತಾಣಗಳನ್ನು ಅತಿಯಾಗಿ ಬಳಸುವುದರಿಂದ ಋಣಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ಶಿವಮೊಗ್ಗ ಕಟೀಲ್ ಅಶೋಕ್ ಪೈ ಕಾಲೇಜಿನ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ.ಅರ್ಚನಾ ಭಟ್ ಹೇಳಿದರು.

ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಆಪ್ತ ಸಮಾಲೋಚನೆ ಮತ್ತು ಮಾರ್ಗದರ್ಶನ ಎಂಬ ವಿಷಯದ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿ, 18 ರಿಂದ 23 ವರ್ಷದವರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಒತ್ತಡಗಳಿಂದ ಖಿನ್ನತೆ, ಮದ್ಯ ಮತ್ತು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದು ಸಮಾಜದ ಅಭಿವೃದ್ಧಿಗೆ ಮಾರಕ ಎಂದರು.ಸಾಮಾಜಿಕ ಜಾಲತಾಣಗಳ ಸಾಧಕ ಬಾಧಕಗಳನ್ನು ಅರಿತಾಗ ಮಾತ್ರ ಅವುಗಳನ್ನು ಮಿತವಾಗಿ ಬಳಸಲು ಸಾಧ್ಯ. ಮೊಬೈಲ್‌ಗಳಲ್ಲಿ ಅತಿಯಾಗಿ ಆನ್‌ಲೈನ್ ಆಟ ಆಡಿ ಕ್ರೂರ ವರ್ತನೆ ಮತ್ತು ಆತ್ಮಹತ್ಯೆಯಂಥ ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ಅವಾಸ್ತವಿಕ ನಿರೀಕ್ಷೆಗಳು ಹೆಚ್ಚಾಗಿ ಮಾನಸಿಕ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ದಿನಕರ್ ಮಾತನಾಡಿ, ಸಮಾಜದಲ್ಲಿ ಜನರು ಪರಿಪೂರ್ಣ ಜೀವನ ನಡೆಸಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಚಟುವಟಿಕೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಆಪ್ತ ಸಮಾಲೋಚನೆ, ಮಾರ್ಗದರ್ಶನ, ಕೌಶಲ ಜನರ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಅವಶ್ಯಕ. ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಹೇಳಿದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಆರ್.ಕೆ.ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಆತ್ಮವಿಶ್ವಾಸದಿಂದ ಅಧ್ಯಯನದಲ್ಲಿ ತೊಡಗಿಕೊಂಡಾಗ ಯಶಸ್ಸು ಸಾಧಿಸಲು ಸಾಧ್ಯ ಎಂದರು.ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ಯುವ ಜನರು ಕಾನೂನು ಪಾಲಿಸಬೇಕು ಎಂದರು. ಸಮಾಜ ಕಾರ್ಯವಿಭಾಗದ ಉಪನ್ಯಾಸಕರಾದ ರುಖಿಯತ್, ಹೇಮಲತಾ, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net