ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ನಡೆಯುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕೇಂದ್ರ ಸರ್ಕಾರದ ವೈಫಲ್ಯ ಕಾರಣ. ಪರೀಕ್ಷೆಯ ಪಾವಿತ್ರೃತೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಕೇಂದ್ರ ಶಿಕ್ಷಣ ಸಚಿವರು ಇದರ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020ರಿಂದ ಮೂರ‌್ನಾಲ್ಕು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಆ ಸಂದರ್ಭದಲ್ಲಿ ಮುಂದೆ ಹೀಗೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಮತ್ತು ತನಿಖೆ ನಡೆಸುವುದಾಗಿ ಭರವಸೆ ನೀಡಿತ್ತು. ತನಿಖೆ ಯಾವ ಹಂತಕ್ಕೆ ತಲುಪಿದೆ, ಯಾರಿಗೆ ಶಿಕ್ಷೆ ಆಗಿದೆ ಎಂಬುದನ್ನು ಕೇಂದ್ರ ಸರ್ಕಾರ ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.
ನಿವೃತ್ತ ಸರ್ಕಾರಿ ಉನ್ನತ ಅಧಿಕಾರಿಗಳ, ಮಂತ್ರಿಗಳ ಬೆಂಬಲದ ಕೋಚಿಂಗ್ ಸೆಂಟರ್‌ಗಳ ಮಾಫಿಯಾವೂ ಈ ಸೋರಿಕೆಯ ಹಿಂದಿರುವ ಸಾಧ್ಯತೆ ಇದೆ. ಇದು ಲಕ್ಷಾಂತರ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಹೇಳಲಾಗಿದೆ. ಆದರೆ ಸರ್ಕಾರಿ ತನಿಖಾ ಸಂಸ್ಥೆಗಳ ಬಗ್ಗೆ ಅನುಮಾನ ಪಡುವ ಪರಿಸ್ಥಿತಿ ಇದೆ. ಪರೀಕ್ಷೆಯನ್ನೇ ರಕ್ಷಿಸಲಾದ ಸರ್ಕಾರ ಮಕ್ಕಳ ಭವಿಷ್ಯವನ್ನು ಹೇಗೆ ರಕ್ಷಿಸುತ್ತದೆ ಎಂದು ಪ್ರಶ್ನಿಸಿದರು.
ಅಧಿಕಾರ ತ್ಯಾಗದಿಂದ ಜನರಿಗೆ ಸುಖ
ಡೀಸೆಲ್, ಪೆಟ್ರೋಲ್ ಮಿತವಾಗಿ ಬಳಸಿ, ಚಿನ್ನ ಖರೀದಿಸಬೇಡಿ ಎಂಬುದಾಗಿ ಜನರಿಗೆ ತ್ಯಾಗದ ಪಾಠ ಮಾಡುವ ಪ್ರಧಾನಿ ಮೋದಿಯವರು ಅಧಿಕಾರ ತ್ಯಾಗ ಮಾಡಿದರೆ ದೇಶದ ಜನರಿಗೆ ಸುಖ ಸಿಗಲಿದೆ ಎಂದು ರಮಾನಾಥ ರೈ ಹೇಳಿದರು.
ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಲ್‌ಪಿಜಿ ಸಬ್ಸಿಡಿ ತ್ಯಜಿಸಿ ಎಂದು ಕರೆ ನೀಡಿದ್ದರು. ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಎಲ್‌ಪಿಜಿ ದರ ಜನಸಾಮಾನ್ಯರಿಗೆ ಹೊರೆ ಆಗದಿರಲೆಂದು ಸಬ್ಸಿಡಿ ನೀಡುತ್ತಿತ್ತು. ಅವೆಲ್ಲವುಗಳನ್ನು ಸ್ಥಗಿತ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಬಂಗಾರವೆಂದರೆ ಹೆಣ್ಣು ಮಕ್ಕಳಿಗೆ ಕೇವಲ ಲೋಹವಲ್ಲ. ಅದು, ಅವರ ಭಾವನೆ, ಕನಸು ಹಾಗೂ ಕಷ್ಟ ಕಾಲದಲ್ಲಿ ರಕ್ಷಣೆ ನೀಡುವ ಭರವಸೆ. ಆದರೆ ಕೇಂದ್ರ ಸರ್ಕಾರದ ನೀತಿಗಳು ಹೆಣ್ಣು ಮಕ್ಕಳ ಭಾವನೆಯನ್ನು ಪ್ರಶ್ನಿಸುವಂತಿದೆ ಎಂದವರು ಹೇಳಿದರು.