ಉಡುಪಿ ಜಿಲ್ಲೆಯ 8 ಕೇಂದ್ರಗಳಲ್ಲಿ ಮೇ 4ರಂದು ನೀಟ್​ ಪರೀಕ್ಷೆ

Neet Lead
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ

ಒಟ್ಟು 2,947 ಅಭ್ಯರ್ಥಿಗಳಿಂದ ನೋಂದಣಿ

ವಿಜಯವಾಣಿ ಸುದ್ದಿಜಾಲ ಉಡುಪಿ

ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ ವತಿಯಿಂದ ನೀಟ್​-ಯುಜಿ 2025 ಪರೀಕ್ಷೆಯು ಮೇ 4ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರ ವರೆಗೆ ಜಿಲ್ಲೆಯ ಒಟ್ಟು 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 2,947 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1:30ರ ಒಳಗಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಮೊಬೈಲ್​, ಸೆಲ್ಯೂಲಾರ್​ ಫೋನ್​, ಟ್ಯಾಬ್ಲೆಟ್​, ಪೆನ್​ಡೆವ್​, ಬ್ಲೂಟೂತ್​ ಡಿವೈಸ್​, ಸ್ಮಾರ್ಟ್​ ವಾಚ್​, ಕ್ಯಾಲ್ಕುಲೇಟರ್​ ಮತ್ತು ಇನ್ನಿತರಯಾವುದೇ ರೀತಿಯ ಇಲೆಕ್ಟ್ರಾನಿಕ್​ ಉಪಕರಣ ತರುವಂತಿಲ್ಲ.

ಪೆನ್​ ತರುವಂತಿಲ್ಲ

ತಿನ್ನಬಹುದಾದ ಪದಾರ್ಥಗಳನ್ನು ಕೊಠಡಿಯೊಳಗೆ ತರುವುದು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿದೆ. ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಇರುವುದರಿಂದ ನೀರಿನ ಬಾಟಲ್​ ತರುವಂತಿಲ್ಲ. ಪೆನ್ಸಿಲ್​, ಪೇಪರ್​, ಇರೇಸರ್​, ಜಾಮಿಟ್ರಿ ಬಾಕ್ಸ್​ ಮತ್ತು ಲಾಗ್​ ಟೇಬಲ್​ಗಳನ್ನೂ ತರುವಂತಿಲ್ಲ. ಅಭ್ಯರ್ಥಿಗಳಿಗೆ ಏಜೆನ್ಸಿ ವತಿಯಿಂದಲೇ ಪೆನ್​ ನೀಡಲಾಗುವುದು.

ವಸ್ತ್ರಸಂಹಿತೆ ಕಡ್ಡಾಯ

ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಎರಡು ಪಾಸ್​ಪೋರ್ಟ್​ ಸೈಜ್​ನ ಭಾವಚಿತ್ರ, ಒಂದು ಪೋಸ್ಟ್​ ಕಾರ್ಡ್​ ಸೈಜ್​ ಭಾವಚಿತ್ರ ಕಡ್ಡಾಯವಾಗಿ ತರಬೇಕು. ಕಡ್ಡಾಯವಾಗಿ ವಸ್ತ್ರಸಂಹಿತೆ ಪಾಲಿಸಬೇಕು. ಪೂರ್ಣ ತೋಳಿನ ಉಡುಪು ಧರಿಸುವಂತಿಲ್ಲ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆಂಬುಲೆನ್ಸ್​ನೊಂದಿಗೆ ವೈದ್ಯಕೀಯ ಸಿಬ್ಬಂದಿ ನೀಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕಲರಿಗೆ ಹೆಚ್ಚುವರಿ ಸಮಯ

ಅಂಗವೈಕಲ್ಯತೆ ಇರುವ ಅಭ್ಯರ್ಥಿಗಳಿಗೆ ಹೆಚ್ಚುವರಿ 1 ಗಂಟೆ ಅಂದರೆ ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ಪರೀಕ್ಷೆ ಬರೆಯಲು ಕಾಲಾವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ವೀಲ್​ ಚೇರ್​ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ದೊಡ್ಡ ಗಡಿಯಾರ ಅಳವಡಿಸಲಾಗುವುದು. ಪರೀಕ್ಷೆ ಪ್ರಾರಂಭವಾದ ಪ್ರತಿ ಮೂವತ್ತು ನಿಮಿಷ್ಕೊಮ್ಮೆ ಬೆಲ್​ ಬಾರಿಸಲಾಗುವುದು. ಪರೀಕ್ಷೆ ಮುಗಿದ ಬಳಿಕ ಬುಕ್​ಲೆಟ್​ ಮತ್ತು ಪೆನ್​ನೊಂದಿಗೆ ಕೇಂದ್ರದಿಂದ ಹಿಂದಿರುಗಬೇಕು.

ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿಯ ಎಲ್ಲ ಸೂಚನೆಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷೆ ಸುಸೂತ್ರವಾಗಿ ನಡೆಯಲು, ಎಲ್ಲ ರೀತಿಯ ಅವ್ಯವಹಾರ ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತಲೂ ಇರುವ ಜೆರಾಕ್ಸ್​ ಅಂಗಡಿ ಮುಚ್ಚಬೇಕು. ಅಲ್ಲದೆ, 200 ಮೀಟರ್​ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಉಡುಪಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net