ನೀಟ್ ರ‌್ಯಾಂಕ್ ವಿಜೇತರಿಗೆ ಸತ್ಕಾರ

IMG-20251001-WA0078.jpg
Published on

ವೈದ್ಯಕೀಯ ಕೋರ್ಸನ್ನು ಯಶಸ್ವಿಯಾಗಿ ಪೂರೈಸಿ, ಸಮಾಜಮುಖಿಯಾಗಿ : ಡಾ. ದತ್ತಪ್ರಸಾದ ಗಿಜರೆ

ನೀಟ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ಬೈಲಹೊಂಗಲ ತಾಲೂಕಿನ ವಿದ್ಯಾರ್ಥಿಗಳಿಗೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸತ್ಕಾರ

ಬೆಳಗಾವಿ: ವೈದ್ಯ ವಿದ್ಯಾರ್ಥಿಗಳಿಗೆ ಬುದ್ಧಿ, ಬೆರಳು, ಬಾಯಿ ಈ ಮೂರು ನಿಜವಾದ ಶಸ್ತ್ರಗಳು ಇದ್ದಂತೆ. ಬುದ್ಧಿಯನ್ನು ವೃದ್ಧಿಸಿಕೊಳ್ಳಬೇಕು, ಮಾತಿನ ಕೌಶಲವನ್ನು, ಕೈಗಳಿಂದ ಉತ್ತಮವಾದ ಚಿಕಿತ್ಸೆಯನ್ನು ನೀಡಬೇಕು ಅಂದಾಗ ಯಶಸ್ವಿ ವೈದ್ಯರಾಗಲು ಸಾಧ್ಯ ಎಂದು ಬೆಳಗಾವಿಯ ಬಂಜೆತನ ಹಾಗೂ ಸ್ತ್ರೀರೋಗ ತಜ್ಞ ಡಾ. ದತ್ತಪ್ರಸಾದ ಗಿಜರೆ ಹೇಳಿದರು.
ಬೆಳಗಾವಿಯ ಬಸವನ ಕುಡಚಿ ದೇವರಾಜ್ ಅರಸ್ ಕಾಲನಿಯ ಶ್ರೀಮತಿ ಚಿನ್ನಮ್ಮ ಬ. ಹಿರೇಮಠ ವೃದ್ರಾಶ್ರಮದಲ್ಲಿ ಆಯೋಜಿಸಿದ್ದ ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದ ಬೈಲಹೊಂಗಲ ತಾಲೂಕಿನ ವಿದ್ಯಾರ್ಥಿಗಳಿಗೆ ಎಫ್ರಾನ (ಸಮವಸ್ತ್ರ), ವೈದ್ಯಕೀಯ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ವೈದ್ಯಕೀಯ ವೃತ್ತಿ ಒಂದು ಪವಿತ್ರ ಸೇವೆಯಾಗಿದೆ. ಇದನ್ನು ಐದು ವರ್ಷಗಳ ಕಾಲ ಕರಗತ ಮಾಡಿಕೊಳ್ಳಬೇಕು. ಅತ್ಯಂತ ಪರಿಶ್ರಮದಿಂದ ಕಲಿಯಬೇಕು. ಮನಸ್ಸನ್ನ ಶರೀರವನ್ನ ಸಮತೋಲನದಲ್ಲಿ ಕಾಯ್ದುಕೊಂಡು ಹೋಗಬೇಕು. ಹಿರಿಯರ ತಂದೆ-ತಾಯಿಗಳ ಸೂಕ್ತ ಮಾರ್ಗದರ್ಶನವನ್ನು ಪಡೆದು ಎಂಬಿಬಿಎಸ್ ಕೋರ್ಸ್ ಯಶಸ್ವಿಯಾಗಿ ಪೂರೈಸಿದ್ದಲ್ಲಿ, ಜೀವನದಲ್ಲಿ ಉತ್ತಮ ವೈದ್ಯರಾಗಲು ಸಾಧ್ಯ ಎಂದರು.

ಡಾ. ರೋಹಿಣಿ ಎಸ್ ನೇಗಿನಾಳ ಮಾತನಾಡಿ, ಡಾ. ರಾಮಣ್ಣವರ ಅವರು ಬೈಲಹೊಂಗಲದ ಈ ಎಲ್ಲ ಪ್ರತಿಭಾ ಸಂಪನ್ನ ವಿದ್ಯಾರ್ಥಿಗಳನ್ನು ಗುರುತಿಸಿ ಸತ್ಕರಿಸುತ್ತಿರುವುದು ಅಭಿನಂದನೀಯ. ವೃದ್ದಾಶ್ರಮದಲ್ಲಿ ಈ ಕಾರ್ಯಕ್ರಮವನ್ನು ಸಂಯೋಜಿಸಿ ಸಾಮಾಜಿಕವಾಗಿ ನಿಮಗೆ ಒಂದು ಸಂದೇಶವನ್ನು ನೀಡಿದ್ದಾರೆ. ಮುಂಬರುವ ವರ್ಷಗಳಲ್ಲಿ ವೈದ್ಯಕೀಯ ಕೋರ್ಸ್ ನ್ನ ಪೂರೈಸಿ, ಸಮಾಜಮುಖಿಯಾಗಿ ಶ್ರಮಿಸಬೇಕೆಂದು ಹೇಳಿದರು.

ಸ್ವಾಗತಿಸಿದ ಡಾ. ಮಹಾಂತೇಶ ರಾಮಣ್ಣವರ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಬೈಲಹೊಂಗಲ ತಾಲೂಕಿನ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳನ್ನು ನಮ್ಮ ಟ್ರಸ್ಟ್ ವತಿಯಿಂದ ಅಭಿನಂದಿಸುತ್ತಾ ಬಂದಿದ್ದೇವೆ. ನೀವು ಉತ್ತಮ ವೈದ್ಯರಾಗಿ ಸಮಾಜ ಸೇವೆಗೆ ತೊಡಗಿದರೆ ನಮ್ಮ ಟ್ರಸ್ಟ್ ಸೇವೆ ಸಾರ್ಥಕವೆ ನಡೆಸುವುದು ಎಂದರು.
ವೃದ್ರಾಶ್ರಮದ ಸಂಯೋಜಕರಾದ ಎಂ.ಎಸ್. ಚೌಗಲಾ, ಕಾರಂಜಿ ಮಠದ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಮಾತನಾಡಿದರು.

ಡಾ. ಸುಭಾಷ ನೇಗಿನಹಾಳ, ಕಿರಣ್ ಚೌಗುಲಾ, ಮಹೇಶ ಗುರನಗೌಡರ್, ಸುಜಿತ ಮೊರಬದ, ಅಜಯ್ ಪೂಜಾರಿ, ಪಾಲ್ಗೊಂಡಿದ್ದರು. ಸಂಕೇತ ಕುಲಕರ್ಣಿ, ಓಂಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net