ಜಾನುವಾರು ತೊಳೆಯಲು ನದಿಗೆ ಇಳಿದಿದ್ದ ರೈತ ನೀರುಪಾಲು

20 SARAG 1 ನಿಲಯ್ಯ
ನೀಲಯ್ಯ
Published on

ಸರಗೂರು: ಪಟ್ಟಣದಲ್ಲಿ ಸೋಮವಾರ ಜಾನುವಾರುಗಳನ್ನು ತೊಳೆಯಲು ನದಿಗೆ ಇಳಿದಿದ್ದ ರೈತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಾಲೂಕಿನ ಹಂಚೀಪುರ ಗ್ರಾಪಂ ವ್ಯಾಪ್ತಿಯ ಹಳಿಯೂರು ಗ್ರಾಮದ ನೀಲಯ್ಯ (55) ಮೃತಪಟ್ಟವರು. ಜಮೀನಿನಲ್ಲಿ ಉಳುಮೆ ಮಾಡಿ ನಂತರ ಬಿಸಿಲು ಇರುವುದರಿಂದ ಜಾನುವಾರಗಳ ಮೈ ತೊಳೆಯಲೆಂದು ಕಪಿಲಾ ನದಿಗೆ ತೆರಳಿದ್ದರು. ಜಾನುವಾರಿನ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಅದನ್ನು ತೊಳೆಯುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ನೀಲಯ್ಯ ಮನೆಗೆ ಸಂಜೆಯಾದರೂ ಬಾರದಿದ್ದರಿಂದ ಅನುಮಾನಗೊಂಡ ಮಗ ಕೃಷ್ಣ ಹುಡುಕಾಡಿದಾಗ ಜಾನುವಾರುಗಳು ನದಿ ದಂಡೆಯಲ್ಲಿ ಪತ್ತೆಯಾಗಿವೆ. ಆದರೆ ತಂದೆ ಕಾಣದಿದ್ದರಿಂದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮುಳುಗು ತಜ್ಞರು ಹುಡುಕಾಡಿ ಶವವನ್ನು ನೀರಿನಿಂದ ಹೊರ ತೆಗೆದಿದ್ದಾರೆ.

ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ನೀಡಲಾಯಿತು ಎಂದು ಇನ್ಸ್‌ಪೆಕ್ಟರ್ ಮಧು ತಿಳಿಸಿದ್ದಾರೆ. ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net