ಬೇವಿನ ಮರದಲ್ಲಿ ಸುರಿಯುತ್ತಿದೆ ಹಾಲು!

27-GPT-4
Published on

ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಮತ್ತು ಬೆಟ್ಟದಮಾದಹಳ್ಳಿ ನಡುವೆ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರ ಕೌತುಕಕ್ಕೆ ಕಾರಣವಾಗಿದೆ.


ನಾಲ್ಕು ದಿನಗಳ ಹಿಂದೆ ಸಣ್ಣದಾಗಿ ಜಿನುಗುತ್ತಿದ್ದ ಹಾಲು ಸೋಮವಾರ ಹೆಚ್ಚು ಪ್ರಮಾಣದಲ್ಲಿ ಸುರಿಯಲಾರಂಭಿಸಿ ಮರದ ಬುಡದಲ್ಲಿ ಮಡುಗಟ್ಟುತ್ತಿದೆ. ಬಾಯಿಯಿಂದ ಬಾಯಿಗೆ ವಿಷಯ ಹರಡಿ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಮರಕ್ಕೆ ಅರಿಶಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸುತ್ತಿದ್ದಾರೆ.


ಈ ಕೌತುಕವನ್ನು ನೋಡಲು ಬರುವ ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಬೇವಿನಮರದ ಹಾಲನ್ನು ನೆಕ್ಕಿದರೆ ಸಿಹಿಯಾಗಿದೆ ಎಂದು ಬೆಟ್ಟದಮಾದಹಳ್ಳಿ ರೈತ ಮುಖಂಡ ಷಣ್ಮುಖಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.


ಕೆಲವು ದಿನಗಳ ಹಿಂದಿನಿಂದಲೂ ಸಮೀಪದ ಮಳವಳ್ಳಿ-ನೇನೆಕಟ್ಟೆ ಗ್ರಾಮಗಳ ನಡುವೆಯೂ ಬೇವಿನ ಮರದಲ್ಲಿ ಹಾಲು ಸುರಿಯುತ್ತಿದ್ದು, ಇದನ್ನೂ ಆಸ್ತಿಕರು ಪೂಜಿಸುತ್ತಿದ್ದಾರೆ. ಮರದ ಬುಡದಲ್ಲಿ ದೇವಾಲಯ ನಿರ್ಮಾಣ ಮಾಡಲು ಗೋಲಕ ಇಟ್ಟು ಭಕ್ತರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net