

ವಿಜಯಪುರ: ನಗರದ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಬಳಿಯ ನೀಲಕಂಠೇಶ್ವರ ಬಡವಾಣೆಯಲ್ಲಿರುವ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ನಡೆಯುವ ನಿರಂತರ ರುದ್ರಾಭಿಷೇಕ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ವಿಜಯಪುರ ಜಿಲ್ಲಾ ಕುರುವಿನಶೆಟ್ಟಿ ಸಮಾಜದ ಅಧ್ಯಕ್ಷ ಡಾ. ವೀರಣ್ಣ ತೊರವಿ ಮಾತನಾಡಿ, ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ನಿರಂತರ ಒಂದು ತಿಂಗಳು ನೀಲಕಂಠೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾಜದ ಬಂಧುಗಳು ರುದ್ರಾಭಿಷೇಕ ಮಾಡಿಸಿ ಗುರು ನೀಲಕಂಠೇಶ್ವರನ ಕೃಪೆಗೆ ಪಾತ್ರರಾಗಬೇಕೆಂದರು.
ನೂತನ ದೇವಸ್ಥಾನದಲ್ಲಿ ಗುರು ನೀಲಕಂಠೇಶ್ವರ ಪ್ರಾಣ ಪ್ರತಿಷ್ಠಾಪನೆಗೊಂಡು ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಶ್ರಾವಣ ಮಾಸದ ಮೊದಲನೇ ಸೋಮವಾರ ಆ.21ರಂದು ಜಾತ್ರಾ ಮಹೋತ್ಸವ ಜರುಗಲಿದೆ.
ಅದರಲ್ಲಿ ಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಮೊದಲ ದಿನದ ರುದ್ರಾಭಿಷೇಕ ಪೂಜೆಯಲ್ಲಿ ಡಾ.ವಿ. ಎ. ತೊರವಿ ಅವರು ಕುಟುಂಬ ಪರಿವಾರದೊಂದಿಗೆ ಭಾಗವಹಿಸಿ ಆಶೀರ್ವಾದ ಪಡೆದರು. ಅರ್ಚಕ ಪರುತಯ್ಯ ಹಿರೇಮಠ ರುದ್ರಾಭಿಷೇಕ ಪೂಜೆ ನೆರವೇರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಈರಣ್ಣ ಶಹಾಪುರ, ಗುರುರಾಜ ಕರಬಂಟನಾಳ, ಕಲ್ಲಪ್ಪ ಮಣ್ಣೂರ, ಮಹಾಂತೇಶ ಹೊಸಮನಿ, ಕಾಂತಪ್ಪ ಜಾಡರ, ಎಂ. ವಿ. ಹಂದಿಗನೂರ, ವಿಶ್ವನಾಥ ಹಂದಿಗನೂರ ಪಾಲ್ಗೊಂಡಿದ್ದರು. ಶ್ರೀಶೈಲ ಶಿರಗುಪ್ಪಿ ನಿರೂಪಿಸಿದರು. ಶ್ರೀಶೈಲ ದೇವೂರ ವಂದಿಸಿದರು.