

ಮುದ್ದೇಬಿಹಾಳ: ಅಂಗನವಾಡಿ ಕಾರ್ಯಕರ್ತೆಯರ ನೇಮಕಕ್ಕೆ ನಕಲಿ ರಹವಾಸಿ ಮಾಡಿಸಿಕೊಡುತ್ತಿರುವ, ಅವರಿಂದ ಅಕ್ರಮವಾಗಿ ಹಣ ಪಡೆದುಕೊಳ್ಳುತ್ತಿರುವ ತಾಳಿಕೋಟೆ ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಬೋರಾವತ್ ವಿರುದ್ಧ ತನಿಖೆ ನಡೆಸಿ ಸೇವೆಯಿಂದ ವಜಾಗೊಳಿಸಬೇಕು ಎಂದು ಕಾರ್ಯಕರ್ತೆಯರಾದ ರೇಣುಕಾ ರಾಮಕೋಟಿ (ಲಮಾಣಿ), ಸಾವಿತ್ರಿ ನಾಗರಿತ್ತಿ, ರೇಣುಕಾ ಹಡಪದ ಇನ್ನಿತರರು ಎಚ್ಚರಿಕೆ ನೀಡಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ 25ಕ್ಕೂ ಹೆಚ್ಚು ಕಾರ್ಯಕರ್ತೆಯರೊಂದಿಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳಿಗೆ ಒಂದು ವಾರ ಕಾಲಾವಕಾಶ ನೀಡಲಾಗುತ್ತಿದೆ. ಅಷ್ಟರೊಳಗೆ ಕ್ರಮ ಆಗದಿದ್ದರೆ ನೀಲಮ್ಮಳಿಂದ ಅನ್ಯಾಯಕ್ಕೊಳಗಾಗಿರುವ ಕಾರ್ಯಕರ್ತೆಯರೆಲ್ಲ ಸೇರಿಕೊಂಡು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ರೇಣುಕಾ ರಾಮಕೋಟಿ ಮಾತನಾಡಿ, ನಾನು ನಕಲಿ ರಹವಾಸಿ ಪಡೆದಿದ್ದೇನೆ. ಅದನ್ನು ತಹಸೀಲ್ದಾರ್ ರದ್ದುಪಡಿಸಿದ್ದಾರೆ ಎಂದು ನೀಲಮ್ಮ ಬುಧವಾರ ಧರಣಿ ಸತ್ಯಾಗ್ರಹ ಅಂತ್ಯಗೊಳಿಸುವಾಗ ಆರೋಪಿಸಿದ್ದಾರೆ. ನನಗೆ ನಕಲಿ ರಹವಾಸಿ ಮಾಡಿಸಿಕೊಟ್ಟಿದ್ದು ಅವರೇ. ನೌಕರಿ ಕೊಡಿಸುವುದಾಗಿ ಹೇಳಿ ನನ್ನಿಂದ 1.30 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಆಪಾದಿಸಿ ತಮ್ಮಿಬ್ಬರ ನಡುವೆ ಹಣಕಾಸಿನ ವ್ಯವಹಾರದ ಮಾತುಕತೆ ಇರುವ ಆಡಿಯೋ ಪ್ರದರ್ಶಿಸಿದರು.
ಸಾವಿತ್ರಿ ನಾಗರಿತ್ತಿ ಮಾತನಾಡಿ, ನೀಲಮ್ಮ ಕಾರ್ಯಕರ್ತೆಯರನ್ನು ಹೆದರಿಸುತ್ತಾರೆ. ಸರ್ಕಾರದ ಸೌಲಭ್ಯ ಲಾನುಭವಿಗಳಿಗೆ ವಿತರಿಸುವುದಿಲ್ಲ. ಅಂಗನವಾಡಿ ಬಾಡಿಗೆ ಹಣ ತಾವೇ ಪಡೆಯುತ್ತಾರೆ. ಕಾರ್ಯಕರ್ತೆಯಾಗಿದ್ದರೂ 2018ರಲ್ಲಿ ತಾಳಿಕೋಟೆ ಪುರಸಭೆಗೆ ಸದಸ್ಯೆ, ಅಧ್ಯಕ್ಷೆಯಾಗಿದ್ದಾರೆ. ರಾಜಕೀಯ ಪಕ್ಷವೊಂದರ ಪರ ಕೆಲಸ ಮಾಡುತ್ತಾರೆ. ಇಂಥ ಹಲವು ಮಾಹಿತಿ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಇದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿ, ಅಧಿಕಾರಿಗಳು ನೀಲಮ್ಮಳ ದೌರ್ಜನ್ಯ, ದಬ್ಬಾಳಿಕೆಗೆ ಹೆದರಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿ ಕಾರಿದರು.
ಶುಕ್ರವಾರ ಮಧ್ಯಾಹ್ನದ ನಂತರ ಅಂಗನವಾಡಿ ಕೆಲಸದ ಅವಧಿ ಮುಗಿದ ಮೇಲೆ ತಹಸೀಲ್ದಾರ್ ಮೂಲಕ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ನೀಲಮ್ಮ ಮಾಡಿರುವ ಅನ್ಯಾಯ, ಅಕ್ರಮಗಳನ್ನು ಬಿಚ್ಚಿಡುತ್ತೇವೆ. ಅವರು ಮಾತನಾಡಿರುವ ಆಡಿಯೋ ತುಣುಕುಗಳನ್ನು ವೈರಲ್ ಮಾಡುತ್ತೇವೆ. ಆವಾಗಲಾದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಾರೋ ಇಲ್ಲವೋ ಕಾದು ನೋಡುತ್ತೇವೆ ಎಂದರು.
ಗುರುಬಾಯಿ ಮಲಗೌಡರ, ಜಯಶ್ರೀ ಕಟ್ಟಿಮನಿ, ಅಮೃತಾ ಪಾಟೀಲ, ಸುವರ್ಣ ಕಾಳೆ, ಮಹಾದೇವಿ ನಾಗೋಡ, ರುದ್ರಮ್ಮ ಕೋಟಿ, ಜಯಶ್ರೀ ಜೀರಲಭಾವಿ, ಶೋಭಾ ಭಜಂತ್ರಿ, ರೇಣುಕಾ ಕುಂಟೋಜಿ, ಾತಿಮಾ ಕಾಳಗಿ, ಭಾರತಿ ಬೂದಿಹಾಳ, ರೇಷ್ಮಾ ನಾಡದಾಳ, ಕಲಾವತಿ ಪಾದಗಟ್ಟಿ, ಶಶಿಕಲಾ ಹಿರೇಮಠ, ಶಿವಲೀಲಾ ಬಿರಾದಾರ, ಲಕ್ಷ್ಮೀ ಬಿರಾದಾರ, ಮೈರುನ ಮುಲ್ಲಾ, ಮೈರುನ ಭಾವಿಕಟ್ಟಿ, ಶೋಭಾ ಪಾಟೀಲ, ಶಕಿಲಾಬಾನು ಮುರಾಳ, ಬೀಬಿಾತಿಮಾ ಶಿರೋಳ ಇತರರಿದ್ದರು.