ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಅಗತ್ಯ ನೆರವು

BYD MEETING
Published on

ಬ್ಯಾಡಗಿ: ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಬ್ಯಾಡಗಿ ಮಾರುಕಟ್ಟೆ ಉಳಿಸುವಲ್ಲಿ ರೈತರು, ದಲ್ಲಾಳಿಗಳು ಹಾಗೂ ಖರೀದಿದಾರರ ಸಹಕಾರ ಅಗತ್ಯವಾಗಿದೆ. ಮಾರುಕಟ್ಟೆ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ನೆರವು ಒದಗಿಸಲಾಗುವುದು ಎಂದು ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಪಟ್ಟಣದ ಎಪಿಎಂಸಿ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಎಪಿಎಂಸಿ ವರ್ತಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 1950ರ ದಶಕದಲ್ಲಿ ಆರಂಭವಾದ ಮೆಣಸಿನಕಾಯಿ ಮಾರುಕಟ್ಟೆ ಈಗ ದೇಶಾದ್ಯಂತ ತನ್ನ ಖ್ಯಾತಿ ವಿಸ್ತರಿಸಿಕೊಂಡಿದೆ. ಆಂಧ್ರ ಪ್ರದೇಶದ ಗುಂಟೂರು ಹೊರತುಪಡಿಸಿ ಏಷ್ಯಾದಲ್ಲಿ ಅತಿದೊಡ್ಡ ಮಾರುಕಟ್ಟೆ ಸ್ಥಾನ ಬ್ಯಾಡಗಿ ಪಡೆದಿದೆ. ಕಳೆದ ಬಾರಿ 3 ಸಾವಿರ ಕೋಟಿ ರೂ. ವಹಿವಾಟು ನಡೆಸಿದ್ದು, 19 ಕೋಟಿ ರೂ. ಸೆಸ್ ಸಂಗ್ರಹವಾಗಿದೆ. ಮಾರುಕಟ್ಟೆ ಅಭಿವೃದ್ಧಿಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲರ ಶ್ರಮ, ಸಹಕಾರವಿದ್ದು, ಅವರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.

ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ:

ಎಸ್ಪಿ ಅಂಶುಕುಮಾರ ಮಾತನಾಡಿ, ನಿತ್ಯ ಸಾವಿರಾರು ವಾಹನಗಳು ಬಂದು ಹೋಗುತ್ತಿದ್ದು, ರಸ್ತೆ ಸಮಸ್ಯೆಯಿಂದ ವಾಹನಗಳಿಗೆ ತೊಂದರೆಯಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳು, ಸರ್ಕಲ್ ಸೇರಿ ವಿವಿಧೆಡೆ ಟ್ರಾಫಿಕ್ ಪೊಲೀಸ್ ಹಾಗೂ ಏಕಮುಖ ರಸ್ತೆಗೆ ಆದೇಶ ಹೊರಡಿಸಲಾಗುವುದು ಎಂದರು.

ಗ್ರೇಡಿಂಗ್ ಪದ್ಧತಿ ಜಾರಿ:

ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ರಾಜ್ಯ ಹಾಗೂ ಹೊರರಾಜ್ಯದಿಂದ ಆಗಮಿಸುವ ಕೆಲ ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರು ಮೆಣಸಿನಕಾಯಿಗಳಿಗೆ ನೀರುಣಿಸಿ ತರುತ್ತಿದ್ದಾರೆ. ಖರೀದಿ ಬಳಿಕ ಎಲ್ಲ ಚೀಲಗಳನ್ನು ಕಡ್ಡಾಯವಾಗಿ ಒಣಗಿಸಿ ತುಂಬಲೇಬೇಕಿದೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಮೆಣಸಿನಕಾಯಿ ಗುಣಮಟ್ಟಕ್ಕೆ ಹಾನಿಯಾಗಿ ಬಣ್ಣ ಕಳೆದುಕೊಳ್ಳಲಿದೆ. ಇಂತಹ ಕಾಯಿ ಅಥವಾ ಫೌಡರ್ ರಫ್ತು ಮಾಡಿದಾಗ ಗ್ರೇಡಿಂಗ್ ಸಮಸ್ಯೆ ಉದ್ಭವಿಸಿ, ಖರೀದಿದಾರರು ದೊಡ್ಡ ನಷ್ಟ ಅನುಭವಿಸುವ ಮೂಲಕ ಮಾರುಕಟ್ಟೆಯ ಖ್ಯಾತಿಗೆ ದಕ್ಕೆಯಾಗಲಿದೆ. ಎಪಿಎಂಸಿ ವತಿಯಿಂದ ಎಲ್ಲ ಅಂಗಡಿಗಳಿಗೆ ಗ್ರೇಡಿಂಗ್ ಮಾಡಲು ಸಿಬ್ಬಂದಿ ನೇಮಿಸಿ, ಗುಣಮಟ್ಟ ಕೊರತೆಯಿರುವ ಲಾಟ್ ತಿರಸ್ಕರಿಸುವ ತಾಂತ್ರಿಕ ವ್ಯವಸ್ಥೆ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಎಪಿಎಂಸಿ ಕಾರ್ಯದರ್ಶಿ ಎಸ್.ವಿ. ಶೈಲಜಾ 15 ವಿಷಯಗಳ ಕುರಿತು ಚರ್ಚೆ ಮಂಡಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎ.ಆರ್. ನದಾಫ್, ರಾಜು ಮೋರಗೇರಿ, ಬಸವರಾಜ ಛತ್ರದ, ನಾಗಪ್ಪ ಕೆಂಬಿ, ಉಳಿವೆಪ್ಪ ಕಬ್ಬೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net