

ಸಿದ್ದಾಪುರ: ದೇಶದ ಸಹಕಾರ ಚಳವಳಿಯ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಒಂದೆಡೆ ಸೇರಿ ಚಳವಳಿಯ ಸಾಧನೆ ಹಾಗೂ ಪ್ರಗತಿಯ ಅವಲೋಕನ ಮಾಡುವುದು ತೀರಾ ಅಗತ್ಯ. ಕೆಲವು ಕಾನೂನು ತಿದ್ದುಪಡಿಯಾಗಿದ್ದು, ಅವುಗಳ ಕುರಿತಾಗಿ ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಹೇಳಿದರು.
ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಕುಮಟಾ ಇವರು ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿ, ಹೈನುಗಾರಿಕೆ, ಮೀನುಗಾರಿಕೆ, ಗ್ರಾಮೀಣ ಸಾಲ, ವಸತಿ, ಜವಳಿ ಇವು ಸಹಕಾರ ಕ್ಷೇತ್ರದಲ್ಲಿ ಬಂದಿದ್ದು, ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಗ್ರಾಹಕ ಸರಕುಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರಕ್ಕೂ ಸಹಕಾರ ಕ್ಷೇತ್ರ ಕಾಲಿಟ್ಟಿದ್ದು ಸಂಪನ್ಮೂಲ, ಮಾರುಕಟ್ಟೆ ಅವಕಾಶವನ್ನು ಸೃಷ್ಟಿಸಿದೆ. ಜನ ಇದರ ಸದುಪಯೋಗ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ತೀರಾ ಅಗತ್ಯ. ಹೊಸ ತಂತ್ರಜ್ಞಾನದ ಆವಿಷ್ಕಾರದಿಂದ ನಮ್ಮ ಜೀವನ ಬದಲಾವಣೆಯನ್ನು ಹೊಂದುತ್ತದೆ. ಅಭಿವೃದ್ಧಿ ಸಾಧಿಸಲು ರೈತರ ಆರ್ಥಿಕ ಪುನಶ್ಚೇತನಕ್ಕೆ ಸಹಕಾರ ಸಂಸ್ಥೆ ಅತ್ಯಂತ ಅಗತ್ಯ ಎಂದರು.
ಸಿ.ಎನ್. ಹೆಗಡೆ ತೆಂಗಾರಮನೆ, ಗಣೇಶ ಭಟ್ಟ ಕಾಜಿನಮನೆ ಇತರರಿದ್ದರು. ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಎಲ್. ಗುಡಿಕೇರಿ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿಯನ್ನು ಟಿಎಂಎಸ್ ಉಪಾಧ್ಯಕ್ಷ ಎಂ.ಜಿ. ನಾಯ್ಕ ಹಾದ್ರಿಮನೆ ಅವರಿಗೆ, ಟಿಎಂಎಸ್ ಪ್ರಧಾನ ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ ಅವರಿಗೆ ಉತ್ತಮ ಸಹಕಾರಿ ನೌಕರ ಪ್ರಶಸ್ತಿ ಹಾಗೂ ಕಂಚೀಕೈ ಸೇವಾ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಎಂ.ವಿ. ಹೆಗಡೆ ಕಂಚಿಕೈ ಸ್ವಾಗತಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರ್ವಹಿಸಿದರು. ದರ್ಶನ ಗಾಂವಕರ ವಂದಿಸಿದರು.