

ಎನ್.ಆರ್.ಪುರ: ಲಾಭವನ್ನು ಸದಸ್ಯರಿಗೆ ಹಂಚಿಕೆ ಮಾಡುವುದೇ ಸಹಕಾರ ಸಂಘಗಳ ಉದ್ದೇಶವಲ್ಲ ಎಂದು ಮ್ಯಾಮ್ಕೋಸ್ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಹೇಳಿದರು.
ಸೋಮವಾರ ಕಳ್ಳಿಕೊಪ್ಪದಲ್ಲಿ ಎನ್.ಆರ್.ಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಹಾಗೂ ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘದ ವ್ಯವಸ್ಥೆಯಿಂದಾಗಿ ರೈತರು ಶೂನ್ಯ ಬಡ್ಡಿ ದರದಲ್ಲಿ ಸಾಲ ಪಡೆಯುವ ಅವಕಾಶ ದೊರೆತಿದೆ. ಈ ಮೂಲಕ ಸಹಕಾರ ಸಂಘಗಳು ರೈತರ ನೆರವಿಗೆ ಧಾವಿಸುತ್ತಿವೆ ಎಂದರು.
ಪ್ರತಿ ಸದಸ್ಯನೂ ಸಾಲ ಮರುಪಾವತಿ ಮಾಡಬೇಕು. ಸಂಘದಲ್ಲಿ ಸಾಲದ ವ್ಯವಸ್ಥೆ ಬಂದಾಗಿನಿಂದ ಖಾಸಗಿ ಹಣಕಾಸು ಸಂಸ್ಥೆಗಳ ಸಾಲದ ವ್ಯವಸ್ಥೆಯನ್ನು ಹತೋಟಿಗೆ ತರಲಾಗಿದೆ. ಸಂಘದ ವ್ಯಾಪ್ತಿಗೆ 33 ಕಂದಾಯ ಗ್ರಾಮಗಳಿದ್ದು, ಎಲ್ಲರೂ ಇದೇ ಮಾರಾಟ ಮಳಿಗೆಯಲ್ಲಿ ವ್ಯಾಪಾರ ಮಾಡುವುದರೊಂದಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ.ಸಂದೀಪ್‌ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕಿನಿಂದ ಮಳಿಗೆಗಳಿಗೆ, ಗೋದಾಮಿಗೆ ಅನುದಾನ ನೀಡುವ ಭರವಸೆ ನೀಡಿದರು.
ಮೆಣಸೂರು ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ಕಳ್ಳಿಕೊಪ್ಪದಂಥ ಗ್ರಾಮೀಣ ಭಾಗದಲ್ಲಿ ಗೋದಾಮು ಹಾಗೂ ಮಾರಾಟ ಮಳಿಗೆ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಸಂಘದ ಸಿಇಒ ಶ್ರೀಕಾಂತ್ ಮಾತನಾಡಿ, ಸಂಘದಲ್ಲಿ 1437 ಸದಸ್ಯರಿದ್ದಾರೆ. 49,44,765 ರೂ. ಷೇರು ಬಂಡವಾಳ ಹೊಂದಿದೆ. 6.10 ಕೋಟಿ ರೂಪಾಯಿ ಬಂಡವಾಳ ದುಡಿಯುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷ ಡಿ.ಆರ್.ಈಶ್ವರ್, ಉಪಾಧ್ಯಕ್ಷೆ ಸವಿತಾ ರತ್ನಾಕರ್, ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಸತೀಶ್, ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಡಿ.ಆರ್.ಶ್ರೀನಾಥ್, ಎಂ.ಟಿ.ಪ್ರವೀಣ್, ನಿರ್ದೇಶಕರಾದ ಎಂ.ಟಿ.ಕುಮಾರ್, ವಿ.ಆರ್.ಯೋಗೀಶ್, ಎಚ್.ಸಿ.ನಾಗೇಂದ್ರ, ಎಸ್.ಎನ್.ಸುಬ್ಬಯ್ಯಗೌಡ, ಇ.ಎಂ.ವೇದಾವತಿ, ಆರ್.ಗಿರೀಶ್‌ಕಾರ್ತಿಕೇಯನ್, ತಿಪ್ಪೇಶ, ಕೆ.ಕೆ.ಬೇಬಿ, ಎ.ಬಿ.ಪ್ರಶಾಂತ, ಕೆ.ಟಿ.ಮಂಜುನಾಥ್, ಮೇಲ್ವಿಚಾರಕ ನಿರ್ದೇಶಕ ಎಂ.ಡಿ.ರಾಜೇಶ್, ಡಾಕಮ್ಮ ಇತರರಿದ್ದರು.