

ವೇಮಗಲ್: ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ದಾನಿಗಳ ನೆರವು ಅಗತ್ಯವಿದೆ. ಖಾಸಗಿ ಶಾಲೆಗಳ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನವಾಗಿ ಎಪ್ಸನ್ನಿಂದ ಜಿಲ್ಲೆಯ ಸರ್ಕಾರಿಶಾಲೆಗಳ 36 ಸಾವಿರ ಮಕ್ಕಳಿಗೆ 1.80 ಲಕ್ಷ ನೋಟ್ಪುಸ್ತಕ, ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು 572 ವಾಟರ್ಫಿಲ್ಟರ್ಗಳ ಕೊಡುಗೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಹೇಳಿದರು.
ಕೋಲಾರ ತಾಲೂಕು ವೇಮಗಲ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಕ ಗೆಳೆಯರ ಬಳಗದ ಆಶ್ರಯದಲ್ಲಿ ಎಪ್ಸನ್ ಕಂಪನಿ ಅಧ್ಯಕ್ಷ ಎನ್.ಸಾಂಭಮೂರ್ತಿ ಮಾರ್ಗದರ್ಶನದಲ್ಲಿ ಕೊಡುಗೆಯಾಗಿ ನೀಡಿರುವ 1.80 ಲಕ್ಷ ನೋಟ್ಪುಸ್ತಕಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಸರ್ಕಾರಿ ನೆರವಿನ ಜತೆಗೆ ದಾನಿಗಳ ನೆರವು ಪಡೆದು ಶಾಲೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಪಾಲಕರು ಕಾನ್ವೆಂಟ್ ವ್ಯಾಮೋಹದಿಂದಾಗಿ ದಾಖಲಾತಿ ಹೆಚ್ಚಿಸಿಕೊಳ್ಳುವುದು ಸವಾಲಾಗಿದ್ದು, ಇಂತಹ ಸಂದರ್ಭದಲ್ಲಿ ಶಾಲಾಮಕ್ಕಳಿಗೆ ತಲಾ 6 ನೋಟ್ ಪುಸ್ತಕಗಳ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೋಲಾರ, ಮಾಲೂರು, ಬಂಗಾರಪೇಟೆ ತಾಲೂಕಿನ 36 ಕ್ಲಸ್ಟರ್ ಸುಮಾರು 450 ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ 36 ಸಾವಿರ ಮಕ್ಕಳಿಗೆ ತಲಾ 6 ಪುಸ್ತಕದಂತೆ ಎಪ್ಸನ್ ಕಂಪನಿ ಒದಗಿಸಿದೆ ಎಂದರು.
ಸರ್ಕಾರಿ ಶಾಲೆಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ವಾಟರ್ಫಿಲ್ಟರ್ ಕೊಟ್ಟಿರುವ ಎಪ್ಸನ್ನ ಪ್ರಯತ್ನದಿಂದ ಮಕ್ಕಳಲ್ಲಿ ಅನಾರೋಗ್ಯ ಮಾಯವಾಗುತ್ತಿದೆ. ಹಾಜರಾತಿ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿ ವಿಜಯ್ ಗೋವಿಂದ್ ಮಾತನಾಡಿ, ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಗುರುವಿಗೆ ನೀಡುವ ಗೌರವ ಕಡಿಮೆಯಾಗುವುದಿಲ್ಲ, ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಿದಾಗ ಮಕ್ಕಳು ದಾರಿ ತಪ್ಪುತ್ತಾರೆ ಎಂದು ಎಚ್ಚರಿಸಿದರು. ಸಂಸ್ಥೆಯ ಅಧ್ಯಕ್ಷ ಎನ್.ಸಾಂಭಮೂರ್ತಿ ಅವರ ಶೈಕ್ಷಣಿಕ ಹಾಗೂ ಸರ್ಕಾರಿ ಶಾಲಾ ಮಕ್ಕಳ ಬಗೆಗಿನ ಕಾಳಜಿಯ ಪ್ರತಿಕವಾಗಿ ಈ ನೆರವನ್ನು ಜಿಲ್ಲೆಗೆ ಹರಿಸುತ್ತಿದ್ದು, ಪ್ರಯತ್ನಕ್ಕೆ ಶಿಕ್ಷಕರ ಬಳಗ ಕೈಜೋಡಿಸಿ ಮಕ್ಕಳಿಗೆ ಪಾರದರ್ಶಕವಾಗಿ ತಲುಪುವಂತೆ ಮಾಡುತ್ತಿದೆ ಎಂದರು.
ಎಪ್ಸನ್ ಕಂಪನಿಯ ಅಧಿಕಾರಿ ರಾಜೇಂದ್ರ ಸಿಂಗ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ನಮ್ಮ ಗುರಿ. ಬಡ ಮಕ್ಕಳಿಗೆ ಕೊರತೆ ಕಾಡಬಾರದು, ಅವರ ಕಲಿಕೆಗೆ ಯಾವುದೇ ಅಡ್ಡಿಯಾಗಬಾರದು ಎಂದು ಕಳೆದ 18 ವರ್ಷಗಳಿಂದ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಶಿಕ್ಷಕ ಗೆಳೆಯರ ಬಳಗದ ಉಪಾಧ್ಯಕ್ಷ ವೀರಣ್ಣಗೌಡ, ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ, ಜಿಲ್ಲಾ ನೌಕರರ ಸಂಘದ ನಿರ್ದೇಶಕ ವೆಂಕಟಾಚಲಪತಿಗೌಡ, ಕಾರ್ಯದರ್ಶಿ ಚಂದ್ರಪ್ಪ, ಖಜಾಂಚಿ ಅಶ್ವತ್ಥಪ್ಪ, ಶಿಕ್ಷಕ ಗೆಳೆಯರ ಬಳಗದ ವೆಂಕಟರಾಂ, ಚಿಕ್ಕಣ್ಣ, ಸೀರೆಸಂದ್ರ ನಾಗರಾಜ್, ಕೆಂಬೋಡಿ ಮಂಜುನಾಥ್, ಕೃಷ್ಣಪ್ಪ, ಸೋಮಶೇಖರ್, ಪಾಪಣ್ಣ, ಬಾಬುರಾವ್ ಇದ್ದರು.