

ಮೈಸೂರು: ಮನುಷ್ಯ ಮನುಷ್ಯರಲ್ಲಿ ಪ್ರೀತಿ ಬೆಸೆಯುವ ಶಿಕ್ಷಣ ಹಾಗೂ ಕಲೆಯ ಅವಶ್ಯಕತೆ ಇದೆ ಎಂದು ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ಜಿಪಿಐಇಆರ್ ರಂಗತಂಡ ನಗರದ ಕಲಾಮಂದಿರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಉದ್ಘಾಟಿಸಿ ಮಾತ ನಾಡಿ, ಓದು, ಬರಹ ಮಾತ್ರ ಶಿಕ್ಷಣವಲ್ಲ, ನಮ್ಮ ವ್ಯಕ್ತಿತ್ವ ವಿಕಸನಗೊಳಿಸುವುದೇ ನಿಜವಾದ ಶಿಕ್ಷಣ. ನಮ್ಮ ವ್ಯಕ್ತಿತ್ವ ವಿಕಸನಗೊಳಿಸಲು ಸಂಸ್ಕಾರದ ಅವಶ್ಯಕತೆ ಇದೆ. ಆ ಸಂಸ್ಕಾರ ಸಿಗುವುದೇ ಕಲೆ, ಸಾಹಿತ್ಯದಲ್ಲಿ ಎಂದು ಅಭಿಪ್ರಾಯಪಟ್ಟರು.
ನಮ್ಮನ್ನು ಪರಿಪೂರ್ಣತೆಯ ಕಡೆಗೆ ಕರೆದೊಯ್ಯುವುದೇ ಕಲೆಗಳು. ಅಂತಹ ಕಲೆಗಳಲ್ಲಿ ರಂಗಭೂಮಿ ಸಹ ಒಂದು. ರಂಗಭೂಮಿ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣದಲ್ಲಿ ರಂಗಭೂಮಿಯ ಅವಶ್ಯಕತೆ ಇದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ರಂಗಭೂಮಿಯ ಅವಶ್ಯಕತೆ ಇದೆ ಎಂದು ಹೇಳಿದರು.
ಜಿಪಿಐಇಆರ್ ನಿರ್ದೇಶಕ ಮೈಮ್ ರಮೇಶ್ ಮಾತನಾಡಿ, ರಂಗಭೂಮಿ ಉದ್ಯಮವಾಗಿ ಮಾರ್ಪಾಡು ಹೊಂದಿದೆ. ಸರ್ಕಾರದ ಅನುದಾನವಿಲ್ಲದೆ ರಂಗಭೂಮಿಯನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಆದರೆ, ನಾವು 70ರ ದಶಕದಲ್ಲಿ ಮನೆ ಮನೆಗೆ ತೆರಳಿ ಬೇಡಿ ನಾಟಕ ಮಾಡಿದೆವು. ನಾವು ಸರ್ಕಾರದ ಅನುದಾನವಿಲ್ಲದೆ ಮೂವತ್ತು ವರ್ಷದಲ್ಲಿ 60 ನಾಟಕ ಪ್ರದರ್ಶನ ಮಾಡಿದ್ದೇವೆ ಎಂದು ಹೇಳಿದರು. ವೇದಿಕೆಯಲ್ಲಿ ಸಿ2ಎಂ ಎಜುಕೆಟ್ ಸಲ್ಯೂಷನ್ಸ್ ನಿರ್ದೇಶಕ ಅಬ್ದುಲ್ ಕರೀಮ್ ಇದ್ದರು.