ದಶ ಧರ್ಮ ಸೂತ್ರಗಳ ಪಾಲನೆ ಅಗತ್ಯ: ರಂಭಾಪುರಿ ಶ್ರೀ

Rambhapuri shri
Published on

ಚಿಕ್ಕಮಗಳೂರು: ಮಾತಿನಲ್ಲಿ ಅದ್ಭುತ ಶಕ್ತಿ ಇದೆ. ಮಾತು ಒಡೆಯಬಲ್ಲದು ಹಾಗೂ ಒಟ್ಟಿಗೆ ಕೂಡಿಸಬಲ್ಲದು. ಮನುಷ್ಯನಿಗೆ ಮಾತೆಂಬುದು ಭಗವಂತ ನೀಡಿದ ವರಪ್ರಸಾದ. ಮಾತು ಕೂಡಿಸಬೇಕೇ ವಿನಃ ಒಡೆಯುವಂತಾಗಬಾರದು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಕಾರ್ತಿಕ ಸಹಸ್ರ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ದಶ ಧರ್ಮ ಸೂತ್ರಗಳು

ಧರ್ಮ ಮಾರ್ಗದಲ್ಲಿ ಸಂಯಮ, ಶಿಸ್ತು, ಅನುಶಾಸನಗಳಿಗೆ ಬಹಳ ಮಹತ್ವವಿದೆ. ಈ ಮೌಲ್ಯಕ್ಕೆ ಸಂಬಂಧಿಸಿದ ಪ್ರಧಾನ ಸೂತ್ರಗಳು ಹತ್ತು. ಅವುಗಳೇ ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳು. ಸ್ವಸ್ಥ ಸಮಾಜದಲ್ಲಿ ಇವು ಪ್ರಭಾತದ ಸೂರ್ಯ ಕಿರಣದಂತೆ ಹರಡುತ್ತಲೇ ಇರುತ್ತವೆ. ಸಂಸ್ಕಾರವಂತ ಕುಟುಂಬಗಳಲ್ಲಿ ಇಂದಿಗೂ ಧರ್ಮಶ್ರದ್ಧೆ, ದೇವತಾ ಭಕ್ತಿ ಮತ್ತು ದೇಶಾಭಿಮಾನ ಇರುವುದನ್ನು ಕಾಣುತ್ತೇವೆ ಎಂದರು.

ದೂರ ಸರಿಯುವುದೇ ಸೂಕ್ತ

ಮಾತು ಮಾಣಿಕ್ಯ, ಮಾತು ಮುತ್ತು, ಮಾತು ಜ್ಯೋತಿರ್ಲಿಂಗ ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಯಾರು ದುರ್ಜನರೆಂದು ನಮಗೆ ಮನದಟ್ಟಾಗುತ್ತದೆಯೋ ಅಂಥವರಿಂದ ದೂರ ಸರಿಯುವುದೇ ಸೂಕ್ತ. ದುರ್ಜನರೊಂದಿಗೆ ಸರಸವೂ ಬೇಡ, ವಿರಸವೂ ಬೇಡ. ಅಂಥವರಿಂದ ದೂರ ಸರಿಯುವುದು ಶ್ರೇಯಸ್ಕರ. ಕತ್ತಲೆಯನ್ನು ಕಳೆಯುವ ಶಕ್ತಿ ದೀಪಕ್ಕೆ ಇರುವಂತೆ ಅಜ್ಞಾನ ಕಳೆಯುವ ಶಕ್ತಿ ಗುರುವಿಗೆ ಇದೆ ಎಂದು ತಿಳಿಸಿದರು.

ಕಾರ್ಜುವಳ್ಳಿ ಮಠಕ್ಕೆ ನಿಯುಕ್ತಿ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಶ್ರೀ ರಂಭಾಪುರಿ ಶಾಖಾ ಕಾರ್ಜುವಳ್ಳಿ ಹಿರೇಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅಕಾಲಿಕವಾಗಿ ಲಿಂಗೈಕ್ಯರಾದ್ದರಿಂದ ಅವರ ಸ್ಥಾನಕ್ಕೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಶ್ರೀ ಸಿದ್ಧಲಿಂಗ ದೇವರನ್ನು ನಿಯುಕ್ತಿಗೊಳಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಜುವಳ್ಳಿ ಹಿರೇಮಠದ ಭಕ್ತರು ಉಪಸ್ಥಿತರಿದ್ದರು.

ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ರಾಜೇಶ್ವರದ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿ ಸಿದ್ಧಲಿಂಗ ದೇವರು, ದಾನಯ್ಯ ದೇವರು, ಬೆಂಗಳೂರಿನ ಗುರುಪಾದಯ್ಯ ಹಿರೇಮಠ, ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ದೀಪೋತ್ಸವ ನಂತರ ಶ್ರೀ ವೀರಭದ್ರಸ್ವಾಮಿ ರಥೋತ್ಸವ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net