

ಮುಳಬಾಗಿಲು: ಕರೊನಾ ಮೂರನೇ ಅಲೆ ತಡೆಯಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಯುವಸಮೂಹ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದು ಶಾಸಕ ಎಚ್.ನಾಗೇಶ್ ಕರೆ ನೀಡಿದರು.
ತಾಲೂಕಿನ ಜೆ.ಅಗ್ರಹಾರ ಬಳಿ ಇರುವ ವಾರಿಧಿ ಪಬ್ಲಿಕ್ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಯಿಂದ ಗುರುವಾರ ಹಮ್ಮಿಕೊಂಡಿದ್ದ ಯುವಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರೊನಾ ಮೂರನೇ ಅಲೆಯನ್ನು ಪ್ರಾರಂಭಿಕ ಹಂತದಲ್ಲೇ ತಡೆಗಟ್ಟಲು ಪ್ರತಿಯೊಬ್ಬರೂ ಕಂಕಣಬದ್ಧರಾಗಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿ ಆಕರ್ಷಣೆಗೆ ಒಳಗಾಗಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಪರಾದ ಚಟುವಟಿಕೆ ಹೆಚ್ಚಾಗುತ್ತಿವೆ, ಇದನ್ನು ತಡೆಗಟ್ಟಲು ಯುವಸಮುದಾಯ ನಮ್ಮ ಸಂಸ್ಕೃತಿ ಪರಂಪರೆ ಅಳವಡಿಸಿಕೊಳ್ಳಬೇಕು ಎಂದರು.
ಮಲ್ಲನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಬಿ.ಎಸ್.ರಮೇಶ್ ಮಾತನಾಡಿ, ಪೂರ್ವಿಕರು ಬಿಟ್ಟು ಹೋದ ಹಲವಾರು ಕಲೆಗಳನ್ನು ಇಂದಿನ ಯುವ ಸಮುದಾಯದ ಅಳವಡಿಸಿಕೊಳ್ಳದ ಕಾರಣದಿಂದ ಅಳಿವಿನಂಚಿಗೆ ಸರಿಯುತ್ತಿವೆ. ನಮ್ಮ ಕಲೆ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.
ಡೋಲು, ವೀರಗಾಸೆ, ಕಂಸಾಳೆ, ಗಾರುಡಿಗೊಂಬೆ, ಶಾಸೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಗಮಕ ಕಥಾ ಕೀರ್ಥನಾ ಮತ್ತು ನಾಟಕ ಸೇರಿ ವಿವಿಧ ಕಲಾ ಪ್ರದರ್ಶನ ನಡೆಯಿತು. ಶಾಲೆ ಸಂಸ್ಥಾಪಕ ಅಧ್ಯಕ್ಷ ಸುಬ್ಬಾರೆಡ್ಡಿ, ಅಧ್ಯಕ್ಷ ಮಂಜುನಾಥ್ ರೆಡ್ಡಿ, ದರಕಾಸ್ತು ಸಮಿತಿ ಸದಸ್ಯ ಪೆದ್ದಪ್ಪಯ್ಯ, ಎಪಿಎಂಸಿ ಅಧ್ಯಕ್ಷ ಜಯರಾಮರೆಡ್ಡಿ, ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ಯುವ ಮುಖಂಡ ಗೊಲ್ಲಹಳ್ಳಿ ಜಗದೀಶ್, ನಗರಸಭೆ ನಾಮ ನಿರ್ದೇಶಕ ರಾಜೇಶ್, ಅನಂತಪದ್ಮನಾಭ ರಾವ್, ಅಂತಾರಾಷ್ಟ್ರೀಯ ಕ್ರೀಡಾಪಟು ರಾಮಮೂರ್ತಿನಾಯ್ಡು, ಪರಶುರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್, ಗ್ರಾಮೀಣ ಮಹಿಳಾ ಒಕ್ಕೂಟ ಮುಖ್ಯಸ್ಥೆ ಜಯಮ್ಮ ಇತರರಿದ್ದರು.