

ಬೆಂಗಳೂರು: ಅಂತಾರಾಷ್ಟ್ರೀಯ ನಗರ ಎನ್ನಿಸಿಕೊಳ್ಳಬೇಕಾದರೆ ದಿನದ 24 ಗಂಟೆಯೂ ನಗರದ ಎಲ್ಲ ಉದ್ಯಮ, ವ್ಯಾಪಾರ ತೆರೆದಿರಬೇಕು ಎಂಬ ಉದ್ದೇಶದಲ್ಲಿ ಮಹಾರಾಷ್ಟ್ರದಲ್ಲಿ ಸೋಮವಾರದಿಂದಲೇ ನಿಯಮ ಜಾರಿಯಾಗಿದೆ. ಪ್ರವಾಸೋದ್ಯಮಕ್ಕೆ ಸಹಕಾರಿಯಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚುತ್ತದೆ ಎಂಬ ನಿರೀಕ್ಷೆಯಲ್ಲಿ ಅಲ್ಲಿನ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಈ ಪ್ರಯತ್ನ ಮಾಡಿದ್ದಾರೆ.
ಇದೇ ನಿಟ್ಟಿನಲ್ಲಿ ಬೆಂಗಳೂರನ್ನೂ 24/7 ತೆರದಿಟ್ಟು ‘ಅಂತಾರಾಷ್ಟ್ರೀಯ’ವಾಗಿಸಬೇಕು ಎಂಬ ಒತ್ತಡ, ಚರ್ಚೆ ಆರಂಭ ವಾಗಿದೆ. ಆದರೆ, ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ಹೋಗುವುದು ಬೇಡ ಎಂಬುದರ ಜತೆಗೆ ವಿವಿಧ ಕಾರಣಕ್ಕೆ ಈ ವಿಚಾರ ಸೂಕ್ತವಲ್ಲ ಎಂಬುದು ಮೇಯರ್ ಎಂ. ಗೌತಮ್ ಕುಮಾರ್ ಅಭಿಪ್ರಾಯ.
ಅನೇಕ ಸಮಸ್ಯೆಗಳಿವೆ: ಬೆಂಗಳೂರು ನಗರದಲ್ಲೂ ಮುಂಬೈ ಮಾದರಿ ನೈಟ್ಲೈಫ್ಗೆ ಅವಕಾಶ ನೀಡುವ ಚಿಂತನೆಗೆ ಗೌತಮ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ವತಿಯಿಂದ ಆಯೋಜಿಸಲಾಗಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಮೇಯರ್ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮುಂಬೈ ಮಾದರಿ ನೈಟ್ಲೈಫ್ ಅವಕಾಶ ಕಲ್ಪಿಸಿದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನೈಟ್ಲೈಫ್ಗೆ ಅವಕಾಶ ಮಾಡುವ ಮುನ್ನ ಮೂರು ಮುಖ್ಯ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ನೀರು, ವಿದ್ಯುತ್ ಹಾಗೂ ಆರೋಗ್ಯ. ಈ ಮೂರೂ ವ್ಯವಸ್ಥಿತ ರೀತಿಯಲ್ಲಿರುವಂತೆ ನೋಡಿಕೊಳ್ಳಬೇಕು. ನೈಟ್ಲೈಫ್ ವಿಸ್ತರಿಸಿದರೆ ಹೆಚ್ಚಿನ ನೀರು ಸರಬರಾಜು ಮಾಡಬೇಕಾಗುತ್ತದೆ. ಈಗಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ. ಮತ್ತೆ ಇದು ಬಿಗಡಾಯಿಸುತ್ತದೆ. ಎರಡನೆಯದಾಗಿ ವಿದ್ಯುತ್ ಸಹ ಸಮಸ್ಯೆಯಾಗುತ್ತದೆ. ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಮೂರನೇಯದಾಗಿ ರಾತ್ರಿ ವೇಳೆಯ ಜೀವನದಿಂದ ನಾಗರಿಕರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನೈಟ್ಲೈಫ್ಗೆ ಅವಕಾಶ ನೀಡುವುದು ಇಂದಲ್ಲ ನಾಳೆ ಸಮಸ್ಯೆಯಾಗುತ್ತದೆ. ಇದು ನಮ್ಮ ಸಂಸ್ಕೃತಿಗೆ ವಿರುದ್ದವಾದದ್ದು. ಸಂಸ್ಕೃತಿಗೆ ವಿರುದ್ಧವಾಗಿ ಹೋಗುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.
ಎರಡೂ ಮುಖ ಇದೆ
ನಾಗರಿಕರಿಂದ ಅಹವಾಲು ಸ್ವೀಕಾರಕ್ಕೆ ವಿಜಯವಾಣಿ ಕಚೇರಿಯಲ್ಲಿ ಜ.18ರಂದು ಆಯೋಜಿಸಿದ್ದ ಫೋನ್ಇನ್ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರ ಪ್ರಶ್ನೆಗೆ ಈ ಕುರಿತು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಉತ್ತರಿಸಿದ್ದರು. ರಾತ್ರಿ ವೇಳೆಯಲ್ಲಿ ಬಾರ್ಗಳ ಎದುರು ನಿಲ್ಲುವ ಅನೇಕರು ನಾಗರಿಕರಿಗೆ ತೊಂದರೆ ನೀಡುತ್ತಾರೆ ಎಂದು ನಾಗರಿಕರೊಬ್ಬರು ದೂರಿದ್ದರು. ಇದಕ್ಕೆ ಉತ್ತರಿಸಿದ್ದ ಭಾಸ್ಕರ್ ರಾವ್, ಈ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳೂ ಇವೆ. 11ಗಂಟೆಗೇ ಒಳ್ಳೆಯವರನ್ನೆಲ್ಲ ಮನೆಗೆ ಕಳಿಸಿಬಿಟ್ಟರೆ ರಾತ್ರಿಯಿಡೀ ಕೆಟ್ಟವರೇ ಹೊರಕ್ಕೆ ಬರುತ್ತಾರೆ. ಅಪರಾಧ ಚಟುವಟಿಕೆ ನಡೆಸಲು ಅವಕಾಶ ಹೆಚ್ಚಿರುತ್ತದೆ. ದಿನಪೂರ್ತಿ ನಗರವನ್ನು ತೆರೆದಿರುವುದರಿಂದ ರಾತ್ರಿಯ ಹೊತ್ತಲ್ಲಿ ಒಳ್ಳೆಯವರೂ ಹೆಚ್ಚೆಚ್ಚು ಓಡಾಡುತ್ತಿರುತ್ತಾರೆ. ಆಗ ಅಪರಾಧ ಚಟುವಟಿಕೆಗಳೂ ಕಡಿಮೆಯಾಗುತ್ತವೆ ಎಂಬ ವಾದವಿದೆ. ಇದರ ಪರ ಹಾಗೂ ವಿರೋಧದ ಚರ್ಚೆಗಳು ನಡೆಯಬೇಕು. ನಂತರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬಹುದು ಎಂದು ತಿಳಿಸಿದ್ದರು.