ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಅಗತ್ಯ

3 Dwd 2
Published on

ಧಾರವಾಡ: ದಿವ್ಯಾಂಗರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರಗಳು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನಕುಮಾರ ಹಂಚಾಟೆ ಹೇಳಿದರು.

ಗ್ರಾಮೀಣ ಬಿಇಒ ಕಾರ್ಯಾಲಯ ಹಾಗೂ ಹೆಬ್ಬಳ್ಳಿ ಗ್ರಾ.ಪಂ. ಸಹಯೋಗದಲ್ಲಿ ನಗರದ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದ ಶಿಕ್ಷಕರ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಗವಿಕಲರ ದೈಹಿಕ, ಮಾನಸಿಕ ನ್ಯೂನತೆಯನ್ನು ಹೋಗಲಾಡಿಸಿ ಅವರ ಸಾಮರ್ಥ್ಯ ಹೆಚ್ಚಿಸಲು ಸಮಾಜ ಪ್ರಯತ್ನಿಸಬೇಕು. ಇಂತಹ ಮಕ್ಕಳ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಅವರಿದ್ದಲ್ಲಿಯೇ ಸರ್ಕಾರದ ಸೌಲಭ್ಯಗಳನ್ನು ಒಯ್ಯುವ ಕೆಲಸವಾಗಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಪ್ರಮೋದ ಮಹಾಲೆ ಮಾತನಾಡಿದರು.

ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಕ್ಷೇತ್ರ ಸಮನ್ವಯ ಅಧಿಕಾರಿ ಎನ್.ಎಸ್. ದಫೇದಾರ, ಇತರರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅವರೊಳ್ಳಿ ಗ್ರಾಮದ ಮುಷ್ಠಿ ಬೀಗ ಪ್ರವೀಣ ವೀರಭದ್ರ ಕಮ್ಮಾರ, ಪತ್ರಕರ್ತ ಬಸವರಾಜ ಹಿರೇಮಠ, ಶಿಕ್ಷಕಿ ಆಶಾ ಮುನವಳ್ಳಿ, ಪ್ರತಿಭಾ ಕಾರಂಜಿ ರಾಜ್ಯ ಮಟ್ಟದ ಪ್ರತಿಭೆ ಅಕ್ಸು ಮುಲ್ಲಾಗೆ ‘ಶ್ರಮಿಕರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅಂಗವಿಕಲ ಮಕ್ಕಳಿಗಾಗಿ ನಿರಂತರ ಸೇವೆಗೈದ ಬಾಬಾಜಾನ ಮುಲ್ಲಾ, ನಂದನಕುಮಾರ ದ್ಯಾಪೂರ, ಕುಸುಮಾವತಿ ಕುಲಕರ್ಣಿ, ಎನ್.ಬಿ. ಹರಿಹರ ಅವರನ್ನು ಸತ್ಕರಿಸಲಾಯಿತು. ಸಂಪನ್ಮೂಲ ಶಿಕ್ಷಕಿ ವಿ.ಎನ್. ಕೀರ್ತಿವತಿ ಸ್ವಾಗತಿಸಿದರು. ಬಸವರಾಜ ದೇಸೂರ ನಿರೂಪಿಸಿದರು. ಲಲಿತಾ ಹೊನವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net