ಬೇಸಿಗೆಯಲ್ಲಿ ಅಗತ್ಯ ನೀರು ಪೂರೈಕೆ

oppo_2
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶಾಸಕ ಕೆ.ಎಂ.ಉದಯ್ ಉದ್ಘಾಟಿಸಿದರು. ಎನ್.ಎಂ.ಪ್ರಕಾಶ್, ಸ್ವಾಮಿ, ರವಿ, ಶಿವಣ್ಣ, ತಮ್ಮಣ್ಣ, ಬಸವರಾಜು, ರಾಜೇಗೌಡನದೊಡ್ಡಿ ಶಿವು, ಯತೀಶ್, ಸತೀಶ್, ಲೋಕೇಶ್, ಚಿಕ್ಕಪುಟ್ಟೇಗೌಡ, ಚಿಕ್ಕಣ್ಣ ಇದ್ದರು.
Published on

ಮದ್ದೂರು: ಮುಂಬರುವ ಬೇಸಿಗೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ನೀರಿನ ಪೂರೈಕೆಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

ತಾಲೂಕಿನ ವಡ್ಡರದೊಡ್ಡಿ ಹಾಗೂ ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಾಗಲೇ ಹಲವಾರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ. ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಕುಡಿಯುವ ನೀರಿನ ಘಟಕ ತೆರೆದು ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಬಾರಿ ದೇವರ ಕೃಪೆಯಿಂದ ಉತ್ತಮವಾಗಿ ಮಳೆ ಬಂದು ಕೆ.ಆರ್.ಎಸ್‌ನಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಹಾಗಾಗಿ ಬೇಸಿಗೆಗೆ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಇನ್ನುಳಿದಂತೆ ರೈತರ ವ್ಯವಸಾಯಕ್ಕೆ ತೊಂದರೆಯಾಗದಂತೆ ಈಗಾಗಲೇ ತಾಲೂಕು ವ್ಯಾಪ್ತಿಯ ಬಹುತೇಕ ಕೆರೆಗಳನ್ನು ತುಂಬಿಸಲಾಗಿದ್ದು, ಶಿಂಷಾ ನದಿಯಿಂದಲೂ ಏತ ನೀರಾವರಿ ಯೋಜನೆಯಿಂದ ಹಲವಾರು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಇದರಿಂದ ಅಂತರ್ಜಲ ಕೂಡ ಅಭಿವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ನಾಲೆಗಳ ಆಧುನೀಕರಣದ ನೆಪದಲ್ಲಿ ನೀರು ನಿಲ್ಲಿಸದಂತೆ ರೈತರು ಕೆಲವು ಕಡೆಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗಾರರು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ತೀರಾ ಅವಶ್ಯಕತೆ ಇರುವ ಕಡೆ ಮಾತ್ರ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲು ಹಾಗೂ ಇದರಿಂದ ರೈತರಿಗೆ ತೊಂದರೆಯಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರಾದ ನಿಡಘಟ್ಟ ಪ್ರಕಾಶ್, ಸ್ವಾಮಿ, ರವಿ, ಶಿವಣ್ಣ, ತಮ್ಮಣ್ಣ, ಬಸವರಾಜು, ರಾಜೇಗೌಡನದೊಡ್ಡಿ ಶಿವು, ಯತೀಶ್, ಸತೀಶ್, ಲೋಕೇಶ್, ಚಿಕ್ಕಪುಟ್ಟೇಗೌಡ, ಚಿಕ್ಕಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net