

ಮಡಿಕೇರಿ: ಜಿಲ್ಲೆಯಲ್ಲಿ ರಸಗೊಬ್ಬರ ಅಗತ್ಯ ದಾಸ್ತಾನು ಇದ್ದು ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ ಎಂದು ಕೊಡಗು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳ ಬಿತ್ತನೆ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟು ೩೦೫೨೫ ಹೆಕ್ಟೇರ್‌ಗೆ ಇಲ್ಲಿಯವರೆಗೆ ೫೮೬೪ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ/ ನಾಟಿ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಕೃಷಿ, ತೋಟಗಾರಿಕೆ ಮತ್ತು ಕಾಫಿ ಬೆಳೆಗಳಿಗೆ ೨೦೨೫ನೇ ಸಾಲಿನ ಮುಂಗಾರು ಹಂಗಾಮಿಗೆ ಸುಮಾರು ೮೮೬೭೭ ಮೆ.ಟನ್ ರಸಗೊಬ್ಬರಗಳ ಅವಶ್ಯಕತೆ ಇದೆಯೆಂದು ಅಂದಾಜಿಸಲಾಗಿದೆ. ಏಪ್ರಿಲ್ ಮಾಹೆಯ ಆರಂಭಿಕ ದಾಸ್ತಾನು(ಕಾಪು ದಾಸ್ತಾನು ಸೇರಿ) ೩೫,೯೨೪ ಮೆ.ಟನ್ ಇದ್ದು, ಜು.೨೮ ರವರೆಗೆ ೫೪೫೨೦ ಮೆ.ಟನ್ ರಸಗೊಬ್ಬರ ವಿವಿಧ ತಯಾರಕ ಸಂಸ್ಥೆಗಳಿಂದ ಜಿಲ್ಲೆಗೆ ಸರಬರಾಜಾಗಿದೆ.
ಒಟ್ಟಾರೆಯಾಗಿ ಇಲ್ಲಿಯವರೆಗೆ ೯೦,೪೪೪ ಮೆ.ಟನ್ ರಸಗೊಬ್ಬರ ಜಿಲ್ಲೆಯ ರೈತರಿಗೆ ಲಭ್ಯವಿದ್ದು, ಸುಮಾರು ೬೦,೧೨೬ ಮೆ. ಟನ್ ರಸಗೊಬ್ಬರವನ್ನು ರೈತರಿಗೆ ವಿತರಣೆ/ ಮಾರಾಟ ಮಾಡಲಾಗಿದೆ. ಬಾಕಿ ೩೦,೩೧೮ ಮೆ.ಟನ್ ರಸಗೊಬ್ಬರ (ಯೂರಿಯಾ ೫೮೫೫ ಮೆಟನ್, ಡಿಎಪಿ-೧೬೪೩ ಮೆಟನ್, ಎಂಓಪಿ ೫೫೨೬ ಮೆ.ಟನ್, ಎನ್‌ಪಿಕೆ ಕಾಂಪ್ಲೆಕ್ಸ್ ೧೬೨೫೦ ಮೆಟನ್ ಹಾಗೂ ಎಸ್‌ಎಸ್ಪಿ ೧೦೪೩ ಮೆಟನ್) ಹಾಲಿ ದಾಸ್ತಾನಿದ್ದು, ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಗಳ ಕೊರತೆಯಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳ ಲಭ್ಯತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿರುವುದಿಲ್ಲ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.