

ಕೆ.ಎಂ.ದೊಡ್ಡಿ: ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ಧಿ ಮಾಡಿ, ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರ ಬೆಳೆಗಳನ್ನು ಉಳಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕ ಕದಲೂರು ಉದಯ್ ಹೇಳಿದರು.
ಸಮೀಪದ ಕೂಳಗೆರೆ ಏತನೀರಾವರಿ ಬಿ ಬಿಂದುವಿನ ಉನ್ನತೀಕರಣ ಮತ್ತು ಪುನರುಜ್ಜೀವನಗೊಳಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ಕೆರೆಗಳಿಗೆ ನೀರು ತುಂಬುವುದರಿಂದ ಅಂತರ್ಜಲ ವೃದ್ಧಿಯಾಗಿ ರೈತರ ಬೋರ್‌ವೆಲ್‌ಗಳಲ್ಲಿ ಹೆಚ್ಚು ಜಲ ವೃದ್ಧಿಯಾಗಲಿದ್ದು, ಉತ್ತಮ ಬೆಳೆ ಬೆಳೆಯುವುದಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೂಳಗೆರೆಯಿಂದ ಮಲ್ಲನಕುಪ್ಪೆವರೆಗೆ ಮಳೆ ಹಾಗೂ ಬೋರ್‌ವೆಲ್ ಆಶ್ರಿತ ಪ್ರದೇಶವಾಗಿರುವುದರಿಂದ ಈ ಭಾಗದ ಕೆರೆಗಳ ಅಭಿವೃದ್ಧಿ ಹಾಗೂ ನೀರು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸುವ ಜತೆಗೆ ಮುಂದೆ ಈ ಭಾಗದಲ್ಲಿ ಎಂದಿಗೂ ಕುಡಿಯಲು ಮತ್ತು ಬೇಸಾಯ ಮಾಡಲು ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಬೇಸಿಗೆ ಆರಂಭವಾಗಿರುವುದರಿಂದ ನೀರಿನ ಸಮಸ್ಯೆ ನೀಗಿಸಲು ಈಗಾಗಲೇ ಅಧಿಕಾರಿಗಳ ಜತೆಯಲ್ಲಿ ಹಲವಾರು ಬಾರಿ ಸಭೆ ನಡೆಸಿ ಚರ್ಚಿಸಿದ್ದು, ಶಾಶ್ವತವಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೂಳಗೆರೆ ಏತ ನೀರಾವರಿಗೆ 1977ರಲ್ಲಿ ಚಾಲನೆ ದೊರೆತಿತ್ತು. ಆದರೆ ಅಲ್ಲಿಂದ ಇಲ್ಲಿಯವರೆಗೆ ರೈತರಿಗೆ ಈ ಯೋಜನೆಯಿಂದ ಸಮರ್ಪಕವಾಗಿ ಅನುಕೂಲವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ನನ್ನ ಗಮನಕ್ಕೆ ತಂದ ಕಾರಣ ಯೋಜನೆಗೆ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿ ಸುಮಾರು 2100 ಎಕೆರೆ ಜಮೀನಿಗೆ ನೀರುಣಿಸುವ ಯೋಜನೆ ಆಗಿದೆ ಎಂದು ಹೇಳಿದರು.
ಕೆಆರ್‌ಎಸ್ ಕೊನೆಯ ಭಾಗವಾದ್ದರಿಂದ ಕೊಳವೆ ಬಾವಿ ಮತ್ತು ಮಳೆ ಆಶ್ರಿತ ವ್ಯವಸಾಯ ಮಾಡುತ್ತಿದ್ದು, ಇಪ್ಪತ್ತು ವರ್ಷಗಳಿಂದ ಸ್ಥಗಿತವಾಗಿದ್ದ ಏತ ನೀರಾವರಿ ಯೋಜನೆಗೆ ಪುನರುಜ್ಜೀವನ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಬನ್ನಹಳ್ಳಿ ಏತ ನೀರಾವರಿ ಯೋಜನೆ ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು.
ಮುಂದಿನ ಮುಂಗಾರು ಮಳೆ ಸಮಯದಲ್ಲಿ ಎಲ್ಲ ಕೆರೆ ತುಂಬಿಸುವ ಕಾರ್ಯ ಯಶಸ್ವಿಯಾಗಿ ಆಗಲಿದೆ, ಪಕ್ಕದ ಚನ್ನಪಟ್ಟಣ ತಾಲೂಕಿನಿಂದ ಮದ್ದೂರು ತಾಲೂಕಿನ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಅನುಕೂಲ ಕಲ್ಪಿಸಲಾಗುವುದು ಎಂದರು.
ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಚಲುವರಾಜು, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮೋಹನ್, ನವೀನ್, ಸಹಾಯಕ ಇಂಜಿನಿಯರ್ ಚೈತ್ರಾ, ಪಿಡಿಒ ರಾಜಣ್ಣ, ಮುಖಂಡರಾದ ಶ್ರೀನಿವಾಸ , ಕೃಷ್ಣ, ಜಯರಾಮು, ಕೆಂಪರಾಜು, ರಮಣರೆಡ್ಡಿ ಇತರರು ಇದ್ದರು.