

ಮದ್ದೂರು: ಬಾಣಂಜಿ ಪಂತ್ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ಗುರುವಾರ ರುದ್ರಾಕ್ಷಿಪುರ-ಕೆ.ಹೊನ್ನಲಗೆರೆ ಮಾರ್ಗದ ರಸ್ತೆಯನ್ನು 6 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಈ ಭಾಗದ ಬಾಣಂಜಿ ಪಂತ್ ವ್ಯಾಪ್ತಿಯ ಭೀಮನಕೆರೆ, ಕೆ.ಬೆಳ್ಳೂರು, ಅರೆತಿಪ್ಪೂರು, ಕೆ.ಹೊನ್ನಲಗೆರೆ, ತೊಪ್ಪನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕೆರೆಗಳಿಗೆ ಏತನೀರಾವರಿ ಯೋಜನೆಯಡಿ ನೀರು ತುಂಬಿಸುವ ಕೆಲಸದಲ್ಲಿ ವಿಳಂಬವಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಎಂದರು.
ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ, 25 ವರ್ಷದ ಹಿಂದೆ ಅಳವಡಿಸಿದ್ದ ಮೋಟಾರ್ ಕೆಟ್ಟು ಹೋಗಿರುವ ಕಾರಣ ವಿಳಂಬವಾಗಿದೆ ಎಂದು ತಿಳಿದು ಬಂತು, ಸ್ವಂತ ಖರ್ಚಿನಲ್ಲಿಯೇ ಮೋಟಾರ್ ರಿಪೇರಿ ಮಾಡಿಸಿ ನೀರು ತುಂಬಿಸಲು ಸೂಚನೆ ನೀಡಿದ್ದೇನೆ. ಈ ಭಾಗದ ರೈತರು ಅತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಮನ್‌ಮುಲ್ ನಿರ್ದೇಶಕರ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದವರು ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಬ್ಬರು ಅನರ್ಹರಾಗುತ್ತಾರೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ, ಜೆಡಿಎಸ್‌ನವರು ಹಿಂದಿನಿಂದಲೂ ಈ ಚಾಳಿಯನ್ನು ಬಿಟ್ಟಿಲ್ಲ, ಕಾಂಗ್ರೆಸ್ ಅಭ್ಯರ್ಥಿಗಳಾದ ಕದಲೂರು ರಾಮಕೃಷ್ಣ ಹಾಗೂ ಹರೀಶ್ ಅವರು ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದೇ ವೇಳೆ ರೈತರು ಮತ್ತು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಬಗೆಹಸುವ ಬಗ್ಗೆ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಮುಖಂಡರಾದ ಪುಟ್ಟಸ್ವಾಮಿ, ಶಿವು, ಮುತ್ತಣ್ಣ, ಶಿವರಾಮು ಇದ್ದರು.