ಪಾಲಿಕೆ ಆರಂಭಕ್ಕೆ ಅಗತ್ಯ ಕ್ರಮವಾಗಲಿ

4 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಿಸಿರುವ ಸರ್ಕಾರವು ಪಾಲಿಕೆ ಕಾರ್ಯಾರಂಭಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಅಧ್ಯಕ್ಷ ಮನೋಜ ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಹಲವು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಉತ್ತಮ ಫಲ ಸಿಕ್ಕಿದೆ. ಸರ್ಕಾರ ಬರೀ ಘೋಷಣೆ ಮಾಡಿದರೆ ಸಾಲದು. ಪಾಲಿಕೆ ಕಾರ್ಯ ನಿರ್ವಹಿಸುವಂತೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ನಿಗದಿತ ಅವಧಿಯಲ್ಲಿ ಪ್ರತ್ಯೇಕ ಪಾಲಿಕೆ ಬಗ್ಗೆ ಗೆಜೆಟ್​ ಪ್ರಕಟಣೆ, ವಾರ್ಡಗಳ ಪುನರ್​ ವಿಂಗಡಣನೆ (ಅಗತ್ಯವಿದ್ದಲ್ಲಿ), ಪ್ರತ್ಯೇಕ ಆಯುಕ್ತರ ಮತ್ತು ಇತರ ಮುಖ್ಯ ಅಧಿಕಾರಿಗಳ ನೇಮಕಕ್ಕೆ ಆದೇಶ ಹೊರಡಿಸಬೇಕು. ಪ್ರಸ್ತುತ ಪಾಲಿಕೆ ಸದಸ್ಯರ ಸೇವಾ ಅವಧಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇದರ ಜತೆಗೆ ಮಾರ್ಚ್​ನಲ್ಲಿ ಮಂಡಿಸುವ ಬಜೆಟ್​ನಲ್ಲಿ ಸೂಕ್ತ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಅವಳಿನಗರ ಪಾಲಿಕೆ ಅವಧಿಯಲ್ಲಿ (ಸುಮಾರು 62 ವರ್ಷ) ಧಾರವಾಡ ನಾಗರಿಕರಿಗೆ ಆಗಿರಬಹುದಾದ ಅಭಿವೃದ್ಧಿಯ ಅನಾದರ, ಅನುದಾನ ವಿತರಣೆಯಲ್ಲಿನ ಅಸಮಾನತೆ, ಅಭಿವೃದ್ಧಿ ಕಾರ್ಯದಲ್ಲಿನ ಏರುಪೇರು, ನಿರಂತರ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ, ರಸ್ತೆ ಸೌಂದಯೀರ್ಕರಣಗಳ ಬಗ್ಗೆ ತುಲನಾತ್ಮಕ ವರದಿಯನ್ನು ಪರಿಣಿತರೊಂದಿಗೆ ಸಿದ್ಧಗೊಳಿಸಿ ಅದನ್ನು ಬಹಿರಂಗಗೊಳಿಸಬೇಕು. ಒಂದು ವೇಳೆ ಧಾರವಾಡಕ್ಕೆ ಅಸಮಾನತೆ ಆಗಿದ್ದರೆ ಅದರ ನಿವಾರಣೆಗೆ ವಿಶೇಷ ನಿಧಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಸಿ.ಎಸ್​. ಪಾಟೀಲ, ಬಿ.ಎನ್​. ಪೂಜಾರಿ, ಎಂ.ಬಿ. ಕಟ್ಟಿ, ಜಿ.ಎಸ್​. ಬ್ಯಾಡಗಿ, ಎ.ಎಂ. ಖಾನ್​, ಎಸ್​.ಎಚ್​. ಮಿಟ್ಟಲಕೋಡ, ಷಡಕ್ಷರಯ್ಯ, ಎನ್​.ಜಿ. ರಸಾಳಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net