

ಬೇಲೂರು: ಗ್ರಾಮೀಣ ಭಾಗದ ಗ್ರಾಮಗಳಿಗೆ ಮೂಲಸೌಕರ್ಯ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಜತೆ ಸಂಘರ್ಷ ನಡೆಸಿಯಾದರೂ ಅನುದಾನ ತಂದು ಕೆಲಸ ಮಾಡಿಸಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮೀಪುರ ಹಾಗೂ ಪ್ರಸಾದಿಹಳ್ಳಿ ಗ್ರಾಮದಲ್ಲಿ ಭಾನುವಾರ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ 68 ಲಕ್ಷ ರೂ. ವೆಚ್ಚದಲ್ಲಿ 395 ಮೀ. ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಮುಗಿದು ಸಾರ್ವಜನಿಕರು ಉಪಯೋಗಕ್ಕೆ ಸಿದ್ಧವಾಗಿದೆ. ಗ್ರಾಮಸ್ಥರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ ಗ್ರಾಮೀಣ ಭಾಗದ ಮೂಲಸೌಕರ್ಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಗ್ರಾಮಗಳ ಉದ್ಧಾರವಾಗದೆ ದೇಶ ಉದ್ಧಾರವಾಗದು. ಆದ್ದರಿಂದ ಗ್ರಾಮಗಳ ಉದ್ಧಾರಕ್ಕಾಗಿ ಅನುದಾನ ತರುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಂಘರ್ಷ ನಡೆಸಿಯಾದರೂ ಅನುದಾನ ತರುತ್ತೇನೆ. ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ್ದಾರೆ. ಅವರ ಕನಸನ್ನು ನನಸು ಮಾಡಬೇಕಾಗಿದೆ. ಮತ್ತು ಹಲವು ವರ್ಷಗಳಿಂದ ಲಕ್ಷ್ಮೀಪುರ ಹಾಗೂ ಪ್ರಸಾದಿಹಳ್ಳಿ ರಸ್ತೆ ಹದಗೆಟ್ಟಿತ್ತು. ಚುನಾವಣೆಗೂ ಮೊದಲು ಸನ್ಯಾಸಿಹಳ್ಳಿ ವ್ಯಾಪ್ತಿಯ ಮತದಾರರು ರಸ್ತೆ ಸರಿಪಸಬೇಕೆಂದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಬೇಲೂರು ಕ್ಷೇತ್ರದ ಅಭಿವೃದ್ಧಿಗಾಗಿ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ, ಅನುದಾನ ತರುತ್ತಿದ್ದೇನೆ. ಆದರೆ ಕೆಲ ಮುಖಂಡರು ಸುರೇಶ್ ಯಾವುದೇ ಅನುದಾನ ತರುತ್ತಿಲ್ಲ, ಬೇಲೂರನ್ನು ಅಭಿವೃದ್ಧಿ ಮಾಡಲು ಹಿಂದೆ ಸರಿಯುತ್ತಿದ್ದಾರೆ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಬೇಲೂರು ಅಭಿವೃದ್ಧಿ ಬಗ್ಗೆ ಅತಿ ಹೆಚ್ಚು ಮಾತನಾಡಿದ್ದೇನೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬೇಲೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂದು ಕನಸು ಕಂಡಿದ್ದೇನೆ. ಅದಕ್ಕೆ ತಾಲೂಕಿನ ಜನತೆ ಆಶೀರ್ವಾದಬೇಕು ಎಂದರು.
ಸನ್ಯಾಸಿಹಳ್ಳಿ ಗ್ರಾಪಂ ಸದಸ್ಯರಾದ ವೆಂಕಟೇಶ್, ಶ್ರೀಧರ್, ಖಾದರ್, ರವಿ, ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ವಸಂತಕುಮಾರ್, ಸನ್ಯಾಸಿಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಸದಸ್ಯ ಅಣ್ಣಪ್ಪ ಸೇರಿದಂತೆ ಇತರರಿದ್ದರು.