

ಮದ್ದೂರು: ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಗುರುವಾರ ಪಶು ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಮಾತನಾಡಿ, ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ರಾಜ್ಯಕ್ಕೆ ಎರಡನೇ ಅತಿ ದೊಡ್ಡ ಪಂಚಾಯಿತಿ ಆಗಿರುವುದರಿಂದ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದ್ದು, ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿದೆ ಎಂದರು.
ತಾಲೂಕಿನಲ್ಲಿ ಪಶು ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಹಾಗೂ ಅಧಿಕಾರಿಗಳ ಕೊರತೆ ಇದ್ದರೂ ಇದನ್ನು ಸರಿದೂಗಿಸಿಕೊಂಡು ಉತ್ತಮವಾಗಿ ಸೇವೆ ನೀಡುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ ಜನ ಪ್ರತಿನಿಧಿಗಳು ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಅಭಿವೃದ್ಧಿ ಕಾರ್ಯಕ್ಕೆ ವೇಗ ಬರುತ್ತದೆ. ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಬೇಕೆಂದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಕಬ್ಬು ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಟನ್ ಕಬ್ಬಿಗೆ 5 ರಿಂದ 6 ಸಾವಿರ ನೀಡುವಂತೆ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದು, ಈ ಬಗ್ಗೆ ಸದನದ ಹೊರಗೆ ಮತ್ತು ಒಳಗೆ ನಿರಂತರವಾಗಿ ರೈತರ ಪರ ಹೋರಾಟ ಮಾಡಲಾಗುವುದು ಎಂದರು.
ಕಬ್ಬು ಬೆಳೆಯಲು ರೈತರು ಸಾಕಷ್ಟು ಶ್ರಮ ಹಾಕುತ್ತಿದ್ದು, ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಆದ್ದರಿಂದ ಅವರ ಅವರಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಒತ್ತಾಯ ಮಾಡಿದ್ದೇನೆ. ತಾಲೂಕಿನಲ್ಲಿ ಹೊಸ ಪಶು ಆಸ್ಪತ್ರೆಗಳನ್ನು ತೆರೆಯುವಂತೆ ಸಚಿವ ವೆಂಕಟೇಶ್ ಅವರ ಗಮನಕ್ಕೆ ತಂದ ಹಿನ್ನೆಲೆ ಕೊಪ್ಪ ಭಾಗಕ್ಕೆ ಪಶು ಆಸ್ಪತ್ರೆಯನ್ನು ಮಂಜೂರು ಮಾಡಿದ್ದಾರೆ. ಶೀಘ್ರವಾಗಿ ಉದ್ಘಾಟನೆ ಮಾಡಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಕೆ.ಸಿ.ರಾಧಿಕಾ ಪ್ರಸಾದ್, ಉಪಾಧ್ಯಕ್ಷೆ ಶಾಹಿನ್ ತಾಜ್, ಸದಸ್ಯ ಎ.ಆರ್.ಬಾಬುಕಾಳೇಗೌಡ, ಎಂ.ಎಸ್.ಲೋಕೇಶ್, ಗಾಯಿತ್ರಿ, ಚನ್ನಕೇಶವ, ಜಾವಿದ್ ಪಾಷ, ರೇಖಾವೆಂಕಟೇಶ್, ಪಿಡಿಒ ಬಾಲಾಜಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದು, ಪಶು ವೀಕ್ಷಕ ಶ್ರೀನಿವಾಸ್ ಇತರರು ಇದ್ದರು.