

ಕುಶಾಲನಗರ: ಕುಶಾಲನಗರದಲ್ಲಿ ಬಸ್ ಡಿಪೋ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದರು.
ಇಲ್ಲಿನ ಸರ್ಕಾರಿ ಬಸ್ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇರುವುದು ಒಂದು ಡಿಪೋ ಮಾತ್ರ. ಅಲ್ಲದೆ ಅಲ್ಲಿಯೂ ನೌಕರರ ಕೊರತೆಯಿದ್ದು, ಸ್ಥಳೀಯರು ಸಂಸ್ಥೆಯ ಕೆಲಸಕ್ಕೆ ಸೇರುವಂತಾಗಬೇಕು ಎಂದು ಹೇಳಿದರು.
ಕುಶಾಲನಗರದಲ್ಲಿ ವಾಸಿಸುವ ಸರ್ಕಾರಿ ಮತ್ತು ಖಾಸಗಿ ನೌಕರರ ಹಿತದೃಷ್ಟಿಯಿಂದ ಜಿಲ್ಲೆಯ ವೀರರಾಜಪೇಟೆ ಮತ್ತು ಸೋಮವಾರ ಪೇಟೆ ಘಟಕಕ್ಕೆ ಹೊಸ ಬಸ್‌ಗಳನ್ನು ನೀಡುವ ಸಂಬಂಧ ಪರಿಶೀಲಿಸಲಾಗುವುದು. ಅಲ್ಲದೆ ಹೊಸ ವಿಭಾಗ ಕಚೇರಿ ತೆರೆಯುವ ಸಂಬಂಧ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಪ್ರಶ್ನೆತೊಂದಕ್ಕೆ ಉತ್ತರಿಸಿದರು.
ಕೇರಳದ ಕಣ್ಣೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಿಲ್ಲೆಯಿಂದ ಸಂಪರ್ಕಿಸುವ ಹೊಸ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ. ಅಲ್ಲದೆ ಮಡಿಕೇರಿ ಮತ್ತು ಕುಶಾಲನಗರದಿಂದ ಆರಂಭಿಸಬೇಕೆಂಬ ಯೋಜನೆ ಸಂಸ್ಥೆ ಮುಂದೆ ಇದೆ ಎಂದು ಹೇಳಿದರು.
ಕುಶಾಲನಗರದಲ್ಲಿ ಸರ್ಕಾರಿ ಬಸ್ ನಿಲ್ದಾಣ 24 ಗಂಟೆಯೂ ಕಾರ್ಯ ನಿರ್ವಹಿಸುವಂತೆ ಆಗಬೇಕು ಎನ್ನುವ ಪ್ರಶ್ನೆಗೆ,ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.
ಕುಶಾಲನಗರ ಬಸ್ ನಿಲ್ದಾಣದ ಸಂಚಾರ ವ್ಯವಸ್ಥಾಪಕ ಶಾಮಶೆಟ್ಟಿ, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ಮತ್ತಿತರರು ಹಾಜರಿದ್ದರು.