

ಮಡಿಕೇರಿ: ೬೭ನೇ ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯು ಜ.೩ ರಿಂದ ೮ ರವರೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೂಡಿಗೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸ್ಪಷ್ಟ ನಿರ್ದೇಶನ ನೀಡಿದರು.
ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿ ಆಯೋಜನೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಗೆ ಆಗಮಿಸುವ ಕ್ರೀಡಾಪಟುಗಳು, ತೀರ್ಪುಗಾರರು ಹಾಗೂ ತರಬೇತಿದಾರರು ಆಗಮಿಸಲಿದ್ದಾರೆ. ಅವರಿಗೆ ವಸತಿ, ಉಪಹಾರ, ಊಟ, ಬಿಸಿನೀರು, ಶೌಚಾಲಯ ಹೀಗೆ ಪ್ರತಿಯೊಂದನ್ನು ಸಹ ಕಲ್ಪಿಸಬೇಕಿದ್ದು, ಯಾವುದೇ ರೀತಿಯ ವ್ಯತ್ಯಾಸ ಆಗದಂತೆ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜತೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನಗರಾಭಿವೃದ್ಧಿ ಇಲಾಖೆ, ಪಂಚಾಯತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಸೆಸ್ಕ್ ಹೀಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕ್ರೀಡಾಪಟುಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ವಾಹನ ವ್ಯವಸ್ಥೆ ಮಾಡುವುದು, ಕುಡಿಯುವ ನೀರು ಕಲ್ಪಿಸುವುದು, ಅಗತ್ಯ ಬಸ್ ಸೌಲಭ್ಯ, ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಪ ನಿರ್ದೇಶಕರಿಗೆ ಸಲಹೆ ಮಾಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗೆ ಕ್ರೀಡಾ ಇಲಾಖೆಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಪತ್ರ ಬರೆಯುವಂತೆ ತಿಳಿಸಿದ ಅವರು, ವಸತಿ, ಆಹಾರ, ಸಾರಿಗೆ, ವೇದಿಕೆ, ಕುಡಿಯುವ ನೀರು, ಶಿಷ್ಠಾಚಾರ, ಸ್ವಾಗತ, ವೈದ್ಯಕೀಯ, ಹೀಗೆ ವಿವಿಧ ಉಪ ಸಮಿತಿಗಳ ಪಟ್ಟಿ ಮಾಡಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸಂಖ್ಯೆ, ತರಬೇತಿದಾರರು, ತೀರ್ಪುಗಾರರ ಸಂಖ್ಯೆ, ವಸತಿ ವ್ಯವಸ್ಥೆ ಮತ್ತಿತರ ಬಗ್ಗೆ ಗಮನಹರಿಸಬೇಕು. ವಸತಿ ಶಾಲೆ, ವಿದ್ಯಾರ್ಥಿ ನಿಲಯ ಜತೆಗೆ ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆ.ರಾಮರಾಜನ್ ಸಲಹೆ ಮಾಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಸ್ಥಳೀಯ ಆಡಳಿತಗಳಿಂದ ಸ್ವಯಂ ಸೇವಕರನ್ನು ನಿಯೋಜಿಸುವಂತಾಗಬೇಕು. ಟ್ಯಾಂಕರ್ ಮೂಲಕವು ನೀರು ಒದಗಿಸಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮದೇ ಕಾರ್ಯಕ್ರಮವೆಂದು ಭಾವಿಸಿ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ ಯಶಸ್ಸಿಗೆ ಕೈಜೋಡಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಮಾಹಿತಿ ನೀಡಿ, ಜಿಲ್ಲೆಯ ಬಸವನಹಳ್ಳಿ, ಕೂಡಿಗೆ, ಕುಶಾಲನಗರ, ತೋಳೂರು ಶೆಟ್ಟಳ್ಳಿ, ತಿತಿಮತಿ, ಪೊನ್ನಂಪೇಟೆ, ಮಡಿಕೇರಿ ಸೇರಿದಂತೆ ಹಲವೆಡೆ ವಿವಿಧ ವಿದ್ಯಾರ್ಥಿ ನಿಲಯಗಳು, ಹೀಗೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಮುಂದಾಗಲಾಗಿದೆ. ಜ.೩ ರಂದು ಮುಖ್ಯಮಂತ್ರಿರವರು ರಾಷ್ಟ್ರ ಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಜ.೪ ರಿಂದ ಪಂದ್ಯಾವಳಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್ ಮಾತನಾಡಿ, ಹಾಕಿ ಪಂದ್ಯಾವಳಿಗೆ ರಾಷ್ಟ್ರದ ಹಲವು ರಾಜ್ಯಗಳಿಂದ ಹಾಕಿ ತಂಡಗಳು ಆಗಮಿಸಲಿದೆ. ೩೮ ರಿಂದ ೪೦ ತಂಡಗಳು ಭಾಗವಹಿಸುವ ಸಾಧ್ಯತೆ ಇದೆ. ಒಂದು ತಂಡದಲ್ಲಿ ೧೮ ಕ್ರೀಡಾ ಪಟುಗಳು ಒಬ್ಬ ತರಬೇತುದಾರರು, ಒಬ್ಬ ತಂಡದ ವ್ಯವಸ್ಥಾಪಕರು, ಒಬ್ಬ ಜನರಲ್ ಮ್ಯಾನೇಜರ್ ಒಟ್ಟು ೨೧ ಜನರು ಭಾಗವಹಿಸಲಿದ್ದಾರೆ. ಒಟ್ಟು ೮೪೦ ಕ್ರೀಡಾಪಟುಗಳು ಹಾಗೂ ೪೦ ರಿಂದ ೫೦ ತೀರ್ಪುಗಾರರು ಮತ್ತು ೨೦ ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ಅತಿಥಿಗಳನ್ನೊಳಗೊಂಡಂತೆ ಒಟ್ಟು ೯೫೦ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಜಿಲ್ಲೆಯ ನಾಲ್ಕು ಮೈದಾನದಲ್ಲಿ ಪಂದ್ಯಾವಳಿ ನಡೆಯುವುದರಿಂದ ಪಂದ್ಯ ನಡೆಯುವ ಕಡೆಗಳಲ್ಲಿ ೮ ರಿಂದ ೧೦ ತಂಡಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ ನಾಯಕ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಸಪ್ಪ, ಜಿ.ಪಂ.ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ದಿವಾಕರ, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ ಇತರರು ಇದ್ದರು.