ಲೋಕಸಭೆ ಚುನಾವಣೆ ಎದುರಿಸಲು ಅಗತ್ಯ ಸಿದ್ಧತೆ

Chandrashekhar nayak
Published on

ರಾಯಚೂರು: ಚುನಾವಣೆ ಆಯೋಗ ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಕಾರಿ ಚಂದ್ರಶೇಖರ ನಾಯಕ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.4ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏ.19ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಏ.20ರಂದು ನಾಮಪತ್ರ ಪರಿಶೀಲನೆ, ಏ.22 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ ಎಂದರು.
ಮೇ 7ರಂದು ಮತದಾನ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲೆಯಲ್ಲಿ 9,85,675 ಪುರುಷ, 10,05,246 ಮಹಿಳಾ ಮತ್ತು ಲಿಂಗತ್ವ ಅಲ್ಪ ಸಂಖ್ಯಾತರ 297 ಮತದಾರರು ಸೇರಿದಂತೆ ಒಟ್ಟು 19,93,755 ಮತದಾರರಿದ್ದಾರೆ. ಇದರಲ್ಲಿ 42,394 ಯುವ ಹಾಗೂ 22,857 ವಿಕಲಚೇತನ ಮತದಾರರಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಮತ್ತು ಇನ್ನಿತರ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು 1950ಕ್ಕೆ ಕರೆ ಮಾಡುವ ಮೂಲಕ ಸಿವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಈಗಾಗಲೇ ಮತ ಯಂತ್ರಗಳ ತಪಾಸಣೆ ಕಾರ್ಯ ಪೂರ್ಣಗೊಂಡಿದ್ದು, 2,203 ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದೆ ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಮಾತನಾಡಿ, ಸುವಿಧಾ ಆ್ಯಪ್ ಮೂಲಕ ರಾಜಕೀಯ ಪಕ್ಷಗಳು ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಅವಕಾಶ ಕಲ್ಪಿಸಿದ್ದು, ಖುದ್ದಾಗಿಯೂ ಮನವಿ ಸಲ್ಲಿಸಬಹುದಾಗಿದೆ. ಚುನಾವಣೆ ಆಯೋಗದ ನಿರ್ದೇಶನದಂತೆ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಸಾಗಣೆ ಮಾಡುವವರು ಸೂಕ್ತ ದಾಖಲೆ ಹೊಂದಿರಬೇಕು.
ಜಿಲ್ಲೆಯಲ್ಲಿ 5 ಅಂತಾರಾಜ್ಯ, 9 ಅಂತರ್ ಜಿಲ್ಲೆಯ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದೆ. ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಮದುವೆ, ಹೋರಾಟ, ಪ್ರತಿಭಟನೆ, ಧಾರ್ಮಿಕ ಉತ್ಸವ ಆಯೋಜನೆಗೂ ಅನುಮತಿ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net