ರೋಗಿಗಳಿಗೆ ಸಮರ್ಪಕ ಚಿಕಿತ್ಸೆಗೆ ಅಗತ್ಯ ಕ್ರಮ

oppo_2
ಮದ್ದೂರು ನಗರದ ಗುರುಶಾಂತಪ್ಪ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲ್ಯಾಬೋರೇಟರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ವನಿತಾ, ಎಂ.ಬಿ.ಸಚಿನ್, ಕಮಲ್‌ನಾಥ್ ಇದ್ದರು.
Published on

ಮದ್ದೂರು: ನಗರದ ಗುರುಶಾಂತಪ್ಪ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮತ್ತು ಸೌಲಭ್ಯ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಮಾಹಿತಿ ನೀಡಿದರು.

ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಭಾನುವಾರ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲ್ಯಾಬೋರೇಟರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದಲೂ ಸೌಕರ್ಯ ಕೊರತೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದವು. ಹೀಗಾಗಿ ಸುಸಜ್ಜಿತ ಲ್ಯಾಬೋರೇಟರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರದ ಆದೇಶದಂತೆ ವೈದ್ಯರ ವರ್ಗಾವಣೆಯು ಆಗಿರುವುದರಿಂದ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನೀಗಿಸಲಾಗುವುದು ಹಾಗೂ ತಾಲೂಕು ವೈದ್ಯಾಧಿಕಾರಿಗಳೂ ಕೂಡ ವರ್ಗಾವಣೆಗೊಂಡಿರುವುದರಿಂದ ಇಷ್ಟರಲ್ಲೇ ನೂತನ ವೈದ್ಯಾಧಿಕಾರಿಗಳು ಬರಲಿದ್ದಾರೆ ಎಂದರು.

ಮದ್ದೂರಿನಲ್ಲೇ ಟ್ರಾಮಾ ಕೇಂದ್ರವನ್ನು ತೆರೆಯಲು ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಧಾರಗಳು ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಟ್ರಾಮಾ ಕೇಂದ್ರ ಸೇರಿದಂತೆ ಇನ್ನಷ್ಟು ಸೌಲಭ್ಯಗಳ ಕಾಮಗಾರಿಗಳು ಅಸ್ಪತ್ರೆಯಲ್ಲಿ ನಡೆಯಲಿವೆ ಎಂದರು.

ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ರೋಗಿಗಳಿಗೆ ಅನಗತ್ಯವಾಗಿ ವಿಳಂಬ ಮಾಡದೆ ಸೂಕ್ತ ಚಿಕಿತ್ಸೆ ನೀಡಬೇಕು. ರೋಗಿಗಳಿಂದ ಒಂದು ವೇಳೆ ದೂರು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ನಗರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಎಂ.ಬಿ.ಸಚಿನ್, ಕಮಲ್‌ನಾಥ್, ಸಿದ್ದರಾಜು, ವೆಂಕಟೇಶ್, ಮುಖಂಡರಾದ ಗಿರೀಶ್, ಮಹದೇವಪ್ಪ, ನಿತಿನ್, ಯರಗನಹಳ್ಳಿ ಮಹಾಲಿಂಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net