ಕೊಣ್ಣೂರ ಪಿಎಂಶ್ರೀ ಶಾಲೆಗೆ ಅಗತ್ಯ ಸೌಕರ್ಯ

sanmana
Published on

ನರಗುಂದ: ಶಾಸಕರ ಅನುದಾನದಲ್ಲಿ ಶಾಲೆಗೆ ಅಗತ್ಯವಿರುವ ಶುದ್ಧ ಕುಡಿಯುವ ನೀರು, ರಂಗ ಮಂದಿರ, ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ಭರವಸೆ ನೀಡಿದರು.

ತಾಲೂಕಿನ ಕೊಣ್ಣೂರ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಸುಂದರ ವಾತಾವರಣ, ಮಕ್ಕಳ ಭಾಗವಹಿಸುವಿಕೆ ಬಹಳ ಸಂತೋಷ ತಂದಿದೆ ಎಂದರು.

ಶಿಕ್ಷಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ರಾಜ್ಯದ 4,398 ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. 3646 ಶಾಲೆಗಳಲ್ಲಿ 10 ಕ್ಕಿಂತಲೂ ಕಡಿಮೆ ಮಕ್ಕಳಿದ್ದಾರೆ. ಇಂದಿನ ಖಾಸಗಿ ಶಾಲೆಗಳ ಭರಾಟೆ, ಸ್ಪರ್ಧಾತ್ಮಕ ಯುಗದಲ್ಲಿಯೂ ಕೊಣ್ಣೂರಿನ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ 250 ಮಕ್ಕಳಿಗೆ ಗುಣಮಟ್ಟದ ಅಕ್ಷರಭ್ಯಾಸ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಶಾಲಾಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿರುವ ಶಿಕ್ಷಕರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಣ್ಣೂರ ವಿರಕ್ತಮಠದ ಶ್ರೀಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಶಾಲೆ 7ನೇ ತರಗತಿ ಆದರ್ಶ ವಿದ್ಯಾರ್ಥಿಗಳಾದ ಜಾಫರ್ ರಾಜೇಖಾನ್,ಉಮಾ ಮ್ಯಾಗಲಮನಿ ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಬಾಳಣ್ಣವರ, ಮುಖ್ಯೋಪಾಧ್ಯಾಯ ರಾಮಚಂದ್ರ ಪವಾರ, ಬಸವರಾಜ ಬನಹಟ್ಟಿ, ಶ್ಯಾಮಲಾ ಶಿಂಗೆ, ಮಹಾದೇವಿ ರಾಮಣ್ಣವರ, ರೂಪಾ ವಾಲಗದ, ಕಸ್ತೂರಿ ಬನ್ನಿಗಿಡದ, ತೋಟಯ್ಯ ವಿರಕ್ತಮಠ, ಯೋಗ ಶಿಕ್ಷಕ ದ್ಯಾಮಣ್ಣ ಮ್ಯಾಗಲಮನಿ, ನಿಂಗಪ್ಪ ಸೋಮವಾರ, ಗ್ರಾಪಂ ಸದಸ್ಯ ಕೊಟ್ರೇಶ ಕೊಟ್ಟರಶೆಟ್ಟಿ, ಭೀಮಪ್ಪ ಕೋರಿಗಣ್ಣವರ ಉಪಸ್ಥಿತರಿದ್ದರು. ಫಕೀರಪ್ಪ ಮನಿಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net