ಗ್ರಾಮೀಣ ಕ್ರೀಡೆಗೆ ಅಗತ್ಯ ಪ್ರೋತ್ಸಾಹ

ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ
ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಡಿ. ರವಿಶಂಕರ್ ಚಾಲನೆ ನೀಡಿದರು. ಕಲಾವಿದ ಕುಮಾರ್ ಇತರರಿದ್ದರು.
Published on

 ಸಾಲಿಗ್ರಾಮ: ಚನ್ನಂಗೆರೆ ಗ್ರಾಮದಲ್ಲಿ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ವಾಲಿಬಾಲ್ ಬಾಯ್ಸ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು.

ನಂತರ ಮಾತನಾಡಿ, ಗ್ರಾಮಗಳಲ್ಲಿ ದೇವರ ಉತ್ಸವ ಮತ್ತು ಹಬ್ಬ ಹರಿದಿನಗಳ ಪ್ರಯುಕ್ತ ಸಂಘ-ಸಂಸ್ಥೆಗಳಿಂದ ನಡೆಸುವ ಕ್ರೀಡೆಗಳನ್ನು ಎಲ್ಲರೂ ಬೆಂಬಲಿಸಬೇಕು. ಏಕೆಂದರೆ ಎಲ್ಲೋ ನಡೆಯುವ ಕ್ರೀಡೆಗಳನ್ನು ಟಿವಿ ಮುಂದೆ ಕುಂತು ವೀಕ್ಷಿಸುವ ನಾವುಗಳು ನಮ್ಮ ಗ್ರಾಮೀಣ ಭಾಗದಲ್ಲೇ ಕ್ರೀಡೆಗಳಿಗೆ ಏಕೆ ಪ್ರೋತ್ಸಾಹಿಸಬಾರದು ಎಂದು ಪ್ರಶ್ನಿಸಿದ ಅವರು, ಇಂತಹ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಗ್ರಾಮೀಣ ಕ್ರೀಡೆಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವ ಮೂಲಕ ನಿಮ್ಮೊಂದಿಗೆ ಸದಾ ಇರುತ್ತೇನೆ. ಹಬ್ಬಹರಿದಿನ ದೇವಸ್ಥಾನಗಳ ಅಭಿವೃದ್ಧಿ ಮತ್ತು ಗ್ರಾಮದಲ್ಲಿ ಸಾಮರಸ್ಯದ ಬದುಕಿಗೆ ಬೇಕಿರುವ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಗ್ರಾಮಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಗಳು ನಡೆದರೆ ಗ್ರಾಮದ ಹೆಸರು ಎಲ್ಲೆಡೆ ಪ್ರಚಾರವಾಗುತ್ತದೆ. ಜತೆಗೆ ಗ್ರಾಮದ ಪ್ರತಿಭೆಯು ಇತರರಿಗೆ ಮಾದರಿಯಾಗುತ್ತದೆ. ಅಂತಹ ಕೆಲಸವನ್ನು ಗ್ರಾಮದ ವಾಲಿಬಾಲ್ ಬಾಯ್ಸ ವತಿಯಿಂದ ಮಾಡುತ್ತಿದ್ದಾರೆ. ಇದೇ ರೀತಿ ಕ್ರಿಕೆಟ್, ಕಬಡ್ಡಿ, ಕೋಲಾಟ, ಓಟದ ಸ್ಪರ್ಧೆಗಳು, ಎತ್ತಿನ ಗಾಡಿ ಓಟದ ಸ್ಪರ್ಧೆಗಳು ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜನೆ ಮಾಡಿ ಎಂದು ಕಿವಿಮಾತು ಹೇಳಿದರು.

ಚನ್ನಂಗೆರೆ ಗ್ರಾಮದಲ್ಲಿರುವ ಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ಶಕ್ತಿ ದೇವರ ಹೆಸರಲ್ಲಿ ಪ್ರತಿ ವರ್ಷ ಆ ದೇವರ ಸೇವೆ ಮಾಡಲು ಸಾವಿರಾರು ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ರೀತಿ ಪ್ರತಿ ವರ್ಷವೂ ದೇವರ ಸೇವೆ ಮಾಡಲು ನಾನು ಕೂಡ ಭಾಗವಹಿಸುತ್ತೇನೆ. ಆದರೆ ಈ ಬಾರಿ ಆ ದೇವರ ಜಾತ್ರೆಗೆ ವಿಶೇಷವಾಗಿ ಇಲ್ಲಿನ ಕ್ರೀಡಾಪಟುಗಳು ಆಯೋಜಿಸಿರುವ ಇಂತಹ ಕಾರ್ಯಕ್ರಮ ತಾಲೂಕು ಮತ್ತು ಜಿಲ್ಲಾ ಹಾಗೂ ರಾಜ್ಯದ ಕ್ರೀಡಾಪಟುಗಳ ಗಮನ ಸೆಳೆದಿದೆ. ಹಾಗಾಗಿ ಇಂತಹ ಸ್ಪರ್ಧೆಯನ್ನು ಆಯೋಜಿಸಿದ ಎಲ್ಲ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುತ್ತೇನೆ. ವಿಷ್ಣು ವಾಲಿಬಾಲ್ ಬಾಯ್ಸ, ಅಭಿ ವಾಲಿಬಾಲ್ ಬಾಯ್ಸ, ನವೀನ್ ವಾಲಿಬಾಲ್ ಬಾಯ್ಸ, ಪುನೀತ್ ವಾಲಿಬಾಲ್ ಬಾಯ್ಸ ಆಟ ಎಲ್ಲ ಕ್ರೀಡಾಪಟುಗಳ ಗಮನ ಸೆಳೆದಿದ್ದು ಜೂನಿಯರ್ ಕ್ರೀಡಾಪಟುಗಳಿಗೆ ಮತ್ತಷ್ಟು ಚೈತನ್ಯ ತುಂಬಿದಂತಾಯಿತು ಎಂದರು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಗ್ರಾಮದ ಹಿರಿಯ ಮುಖಂಡರನ್ನು ಗೌರವಿಸುವ ನಿಟ್ಟಿನಲ್ಲಿ ಕ್ರೀಡೆಗಳು ನಡೆಯಬೇಕು. ಜತೆಗೆ ಕ್ರೀಡಾ ಪ್ರಾಯೋಜಕರು ಯಾವುದೇ ಸಮಸ್ಯೆ ಉಂಟಾಗದಂತೆ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಈ ಒಂದು ಸ್ಪರ್ಧೆಯನ್ನು ಯಶಸ್ವಿಯಾಗಿಸುವ ಜತೆಗೆ ಗ್ರಾಮದ ಮುಖಂಡರು ಅವರಿಗೆ ಸಹಕಾರ ನೀಡಬೇಕು ಎಂದು ಸಲಜೆ ನೀಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ವಿಎಸ್‌ಎಸ್ ಉಪಾಧ್ಯಕ್ಷ ಶಂಕರನಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾಕಾಂತರಾಜು, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಸುನಿತಾ ದಿನೇಶ್ ರಘುನಾಯಕ್, ರವಿಕುಮಾರ್ ಅಂಬರೀಶ್. ದೋರೆ, ಬೋರೇಗೌಡ ಪ್ರಕಾಶ್ ಗಂಗಾಧರ್, ಜೈಶಂಕರ್, ಮಲ್ಲೇಶ್, ಇಂಡಿಯನ್ ಚಿತ್ರಕಲಾ ಕಲಾವಿದ ಚನ್ನಂಗೆರೆ ಕುಮಾರ್, ಸೇರಿದಂತೆ ಗ್ರಾಮದ ಮುಖಂಡರು, ವಿವಿಧ ತಂಡದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net