

ಮುಂಡರಗಿ: ಪಟ್ಟಣದಲ್ಲಿ ಸುಸಜ್ಜಿತ ತಾಲೂಕು ಕನ್ನಡ ಸಾಹಿತ್ಯ ಭವನ ನಿರ್ವಣವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಕಟ್ಟಡ ನಿರ್ವಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು. ಕನ್ನಡ ಸಾಹಿತ್ಯ ಬೆಳವಣಿಗೆಗೆ ನಿಮ್ಮೊಂದಿಗೆ ಕೈಜೋಡಿಸಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಭರವಸೆ ನೀಡಿದರು.
ಪಟ್ಟಣದ ಹೊರವಲಯದಲ್ಲಿ ಡಾ.ಅನ್ನದಾನೀಶ್ವರ ಪೂಜ್ಯರು ಉಚಿತವಾಗಿ ನೀಡಿರುವ ವಿಶಾಲ ನಿವೇಶನದಲ್ಲಿ ನಿರ್ವಣಗೊಳ್ಳುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಭವನ ಕಟ್ಟಡ ಕಾಮಗಾರಿಯನ್ನು ಭಾನುವಾರ ವೀಕ್ಷಿಸಿ ಅವರು ಮಾತನಾಡಿದರು. ಡಾ. ಅನ್ನದಾನೀಶ್ವರ ಶಿವಯೋಗಿಗಳು ದೂರದೃಷ್ಟಿ ಹಾಗೂ ಉದಾರ ದೇಣಿಗೆಯ ಫಲದಿಂದಾಗಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ವಣಗೊಳ್ಳುತ್ತಿದೆ. ಇಂತಹ ಬೃಹತ್ ಕಾರ್ಯಕ್ಕೆ ಸಾಹಿತ್ಯಾಸಕ್ತರು, ಅಭಿಮಾನಿಗಳು ಉದಾರವಾಗಿ ನೆರವು ನೀಡಬೇಕು. ಆ ಮೂಲಕ ಕಟ್ಟಡ ಪೂರ್ಣಗೊಳ್ಳಲು ಸಹಕಾರ ನೀಡಬೇಕು ಎಂದರು.
ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯವು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಗೆ ಸವಾಲಿನ ಕೆಲಸವಾಗಿದೆ. ಭವನಕ್ಕೆ ಈಗಾಗಲೇ ಸ್ಲಾ್ಯಬ್ ಹಾಕಲಾಗುತ್ತಿದ್ದು, ಇನ್ನೂ ಸಾಕಷ್ಟು ಕಾರ್ಯಗಳು ಬಾಕಿ ಇವೆ. ಹೀಗಾಗಿ ಭವನ ನಿರ್ವಣಕ್ಕೆ ಎಲ್ಲರೂ ಕೈಜೋಡಿಸಬೇಕು. ದಾನಿಗಳು ಮುಂದೆ ಬರಬೇಕು ಎಂದು ತಿಳಿಸಿದರು.
ಡಾ. ಕುಮಾರಸ್ವಾಮಿ ಹಿರೇಮಠ, ಕಸಾಪ ಮಾಜಿ ತಾಲೂಕಾಧ್ಯಕ್ಷ ಎಸ್.ಬಿ. ಹಿರೇಮಠ, ಪ್ರಶಾಂತ ಗುಡದಪ್ಪನವರ, ಕಸಾಪ ಗೌರವಾಧ್ಯಕ್ಷ ಶಂಕರ ಕೂಕನೂರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಮುಧೋಳ, ಆರ್.ವೈ. ಪಾಟೀಲ, ರವಿ ಲಮಾಣಿ, ಮಾರುತಿ ನಾಗರಹಳ್ಳಿ, ಪವನ್ ಲೆಂಡ್ವೆ, ಇತರರು ಉಪಸ್ಥಿತರಿದ್ದರು.