

ಹಾಸನ: ಪಟ್ಟಣದ ಕ್ರೀಡಾಂಗಣದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ದೊರಕಿಸಿಕೊಡುವುದಾಗಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.
ಅರಕಲಗೂಡು ಪಟ್ಟಣದ ರಾಘವೇಂದ್ರ ಯೂತ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸಿದ್ದರಾಮಯ್ಯ ಕಪ್ ಕ್ರಿಕೆಟ್ ಟೂರ್ನಿಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಕೊಡಿಸುವುದಾಗಿ ಹೇಳಿದರು.
ಮನುಷ್ಯನ ದೈಹಿಕ ಮತ್ತು ಮಾನಸಿಕ ದೃಢತೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ದೇಶ ಮತ್ತು ಊರುಗಳು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಇದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು. ಸಿದ್ದರಾಮಯ್ಯ ಕಪ್ ಟೂರ್ನಿಯ ವಿಜೇತರಿಗೆ ಮುಖ್ಯಮಂತ್ರಿ ಅವರಿಂದಲೇ ಬಹುಮಾನ ಕೊಡಿಸಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಕಾಂಗ್ರೆಸ್ ತಾಲೂಕು ಅಧ್ಯಕ್ಷ ಎಸ್.ಎಸ್.ಪ್ರಸನ್ನ ಕುಮಾರ್ ಮಾತನಾಡಿ, ಪಟ್ಟಣದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಅಗತ್ಯ ಸೌಲಭ್ಯವಿಲ್ಲದೆ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗಿದ್ದು, ಇದರ ಅಭಿವೃದ್ಧಿಗೆ ಅಗತ್ಯ ನೆರವು ದೊರಕಿಸಿ ಕೊಡುವಂತೆ ಮನವಿ ಮಾಡಿದರು. ಫೈನಲ್ ಪಂದ್ಯದಲ್ಲಿ ಗೆದ್ದ ತಂಡದ ಆಟಗಾರರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಂದಲೇ ಬಹುಮಾನ ಕೊಡಿಸುವುದಾಗಿ ಹೇಳಿದರು.
ಕೆ.ಆರ್.ನಗರ ಶಾಸಕ ಡಿ.ರವಿಶಂಕರ್, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಾವಗಲ್ ಮಂಜುನಾಥ್, ಪತ್ರಕರ್ತ ಚಿದಾನಂದ ಪಟೇಲ್, ಮುಖಂಡರಾದ ಡಾ.ದಿನೇಶ್ ಬೈರೇಗೌಡ, ಸುರೇಶ್, ನಾಗರಾಜ್, ಸಿ.ಡಿ.ದಿವಾಕರ್ ಗೌಡ, ಯೋಗೇಶ್, ಅಬ್ದುಲ್ ಸಮದ್ ಉಪಸ್ಥಿತರಿದ್ದರು. ಆರ್‌ಜೆ ಲೆಜೆಂಡ್ಸ್ ತಂಡ ಪ್ರಥಮ ಟ್ರೋಫಿ, ಫೈವ್ ಸ್ಟಾರ್ ಕ್ರಿಕೆಟರ್ಸ್ ತಂಡ ಎರಡನೆಯ ಹಾಗೂ ಓಂ ಸಾಯಿ ಕ್ರಿಕೆಟರ್ಸ್ ತಂಡ ಮೂರನೆಯ ಬಹುಮಾನ ಪಡೆದವು.
ಬಾಕ್ಸ್
ಪತ್ರಿಕಾ ಭವನ ನಿರ್ಮಾಣಕ್ಕೆ ನೆರವಿನ ಭರವಸೆ
ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕೊಡಿಸುವುದಾಗಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು. ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಲು ಪಟ್ಟಣಕ್ಕೆ ಬಂದಿದ್ದ ಅವರು ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ ಸಂಘದ ಮನವಿ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.