

ಬಾಳೆಹೊನ್ನೂರು: ಪಟ್ಟಣದ ಕಡ್ಲೇಮಕ್ಕಿಯಲ್ಲಿರುವ ನಾರಾಯಣಗುರು ಸಮುದಾಯ ಭವನದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲು ಉದ್ದೇಶಿಸಿರುವ ಹೈಟೆಕ್ ಶೌಚಗೃಹಕ್ಕೆ ಸ್ಥಳೀಯ ಗ್ರಾಪಂನಿಂದ ನೆರವು ನೀಡಲಾಗುವುದು ಎಂದು ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಹೇಳಿದರು.
ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಕೋಟಿ ಚೆನ್ನಯ್ಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸ್ಥಳೀಯ ಗ್ರಾಪಂವ್ಯಾಪ್ತಿಯ ಯಾವುದೇ ಗುತ್ತಿಗೆದಾರರನ್ನು ಬಳಸಿಕೊಂಡು ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲು ಗ್ರಾಪಂನಿಂದ ಸಹಕಾರ ನೀಡಲಿದ್ದು, 5 ಲಕ್ಷ ರೂ.ದೊಳಗೆ ಕಾಮಗಾರಿ ನಿರ್ವಹಿಸಬೇಕು. ಶೀಘ್ರದಲ್ಲಿ ಕಾಮಗಾರಿ ಆರಂಭಿಸಿದಲ್ಲಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಿಲ್ಲವ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್ ಮಾತನಾಡಿ, ಬಿಲ್ಲವ ಸಮುದಾಯದ ಯುವಕರು ಒಗ್ಗೂಡಬೇಕು ಎಂಬ ಉದ್ದೇಶದಿಂದ ಪ್ರತೀ ವರ್ಷ ಕೋಟಿ ಚೆನ್ನಯ್ಯ ಕ್ರೀಡಾಕೂಟ ನಡೆಸುತ್ತಿದ್ದು, ಸಮುದಾಯ ಬಲಿಷ್ಠಗೊಳ್ಳಲು ಇದು ಸಹಕಾರಿಯಾಗಿದೆ. ಬಿಲ್ಲವ ಸಂಘದಿಂದ ಸಮುದಾಯದ ಬಾಂಧವರಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದು, ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿಕೊಳ್ಳಬೇಕಿದೆ. ಬಾಳೆಹೊನ್ನೂರು ಭಾಗದಲ್ಲಿ ಬಿಲ್ಲವ ಸಂಘ ತನ್ನದೇ ಆದ ಹೆಸರನ್ನು ಗಳಿಸಿದೆ ಎಂದರು.