ಗುತ್ತಲ ದೊಡ್ಡ ಕೆರೆಗೆ ನೀರು ತುಂಬಿಸಲು ಅಗತ್ಯ ಕ್ರಮ

8GTL1
Published on

ಗುತ್ತಲ: ಅಂತರ್ಜಲ ಮಟ್ಟ ಏರಲು ಪಟ್ಟಣದ ದೊಡ್ಡ ಕೆರೆ ತುಂಬಿಸುವುದು ತೀರಾ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಯೋಜನಾಧಿಕಾರಿ ಮಮತಾ ಹೊಸಗೌಡ್ರ ತಿಳಿಸಿದರು. ಪಟ್ಟಣದ ದೊಡ್ಡ ಕೆರೆಗೆ ಸೋಮವಾರ ಭೇಟಿ ನೀಡಿದ ಅವರು ಕೆರೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಈ ವೇಳೆ ಪಪಂ ಸದಸ್ಯರು ಹಾಗೂ ಅಧಿಕಾರಿಗಳು ಮಾತನಾಡಿ, ಬೇಸಿಗೆಯಲ್ಲಿ ಕೆರೆಯಿಂದ ಗುತ್ತಲ ಹಾಗೂ ಶಿವನಗರಕ್ಕೆ ನೀರು ಪೂರೈಸುವ ಯೋಜನೆ ಕೈಗೊಂಡರೆ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಲಿದೆ ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮಮತಾ ಹೊಸಗೌಡ್ರ, ಇದೊಂದು ದೊಡ್ಡ ಕೆರೆಯಾಗಿದ್ದು, ಹಾವೇರಿ ನಗರಕ್ಕೆ ಹೆಗ್ಗೇರಿ ಕೆರೆಯಿಂದ ಬೇಸಿಗೆಯಲ್ಲಿ ನೀರು ಪೂರೈಸಿದ ಮಾದರಿಯಲ್ಲಿ ಗುತ್ತಲ ಪಟ್ಟಣಕ್ಕೂ ಬೇಸಿಗೆಯಲ್ಲಿ ನೀರು ಪೂರೈಸಬಹುದಾಗಿದೆ. ಈ ಕುರಿತು ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ರ್ಚಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಬಸಾಪುರ ಗ್ರಾಮದ ವ್ಯಾಪ್ತಿಯ ತುಂಗಾ ಮೇಲ್ದಂಡೆಯ ಹೆಚ್ಚುವರಿ ನೀರು ಬಳಸಿಕೊಳ್ಳಲು ಇರುವ ಕಾಲುವೆ ದುಸ್ಥಿತಿ ಪರಿಶೀಲಿಸಿದರು. ರಾಜೀವ ನಗರದ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬಿದ್ದಿರುವ ಕಲ್ಲುಗಳು, ಕಾಲುವೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಲು ಪಪಂ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಡಮನಿ ಅವರಿಗೆ ಸೂಚಿಸಿದರು. ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಜಿಲ್ಲಾ ಯೋಜನಾ ಇಲಾಖೆಯ ಸಹಾಯಕ ಇಂಜಿನಿಯರ್ ನಾಗರಾಜ ಗುಳೇದ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಮಹ್ಮದಹನೀಫ್ ರಿತ್ತಿ, ಖಲೀಲಹ್ಮದ ಖಾಜಿ, ನಿಂಗರಾಜ ನಾಯಕ, ಸಂತೋಷ ಲಮಾಣಿ, ಹನುಮಂತ ಅಗಸಿಬಾಗಿಲದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net