

ಚಿಕ್ಕಮಗಳೂರು: ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಮಕ್ಕಳು, ನಾಗರಿಕರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ತಿಳಿಸಿದರು.
ನಗರಸಭೆ ಆವರಣದಲ್ಲಿ ಪಶುಪಾಲನಾ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ಬೀದಿನಾಯಗಳ ನಿಯಂತ್ರಣ ಕುರಿತ ವಿಶೇಷ ಸಭೆಯಲ್ಲಿ ಮಾತನಾಡಿ, ಬೀದಿನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಉಪಟಳದಿಂದಾಗಿ ಮಕ್ಕಳು ಮತ್ತು ನಾಗರಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಬಂದ ದೂರುಗಳ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದರ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲಾಗಿದೆ ಎಂದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ನಗರಸಭೆ ಮತ್ತು ಸ್ಥಳೀಯ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ಆರು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಯಾರೂ ಭಾಗವಹಿಸಿಲ್ಲ. ತರೀಕೆರೆಯಲ್ಲಿ 2, ಕಡೂರಿನಲ್ಲಿ 2 ಬಾರಿ ಟೆಂಡರ್ ಕರೆದಿದ್ದರೂ ಯಾರೂ ಭಾಗವಹಿಸುತ್ತಿಲ್ಲ ಎಂದರು.
ಬೆಂಗಳೂರಿನ ಡಬ್ಲೂಬಿಎನ್‌ಎಸ್ ಸಂಸ್ಥೆ ಈಗ ಮುಂದೆ ಬಂದಿದ್ದು, ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆದಿದೆ. ನಾಯಿಗಳನ್ನು ಹಿಡಿಯುವ ಬಗ್ಗೆ ನಗರಸಭೆ ಪೌರ ಕಾರ್ಮಿಕರಿಗೆ ತರಬೇತಿ ನೀಡಲಾಗುವುದು. ಈ ಮೂಲಕ ಸಮಸ್ಯೆಯನ್ನು ಸಂಪೂರ್ಣ ಹತೋಟಿಗೆ ತಂದು ನಿಯಂತ್ರಿಸಬಹುದಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದ್ದು, ಇದು ಒಳ್ಳೆಯ ಸಲಹೆ ಎಂದು ಹೇಳಿದ್ದಾರೆ ಎಂದರು.