

ನಂಜನಗೂಡು: ವಿಶಿಷ್ಟ ಸುವಾಸನೆ ಹಾಗೂ ರುಚಿಯನ್ನು ಹೊಂದಿರುವ ನಂಜನಗೂಡು ರಸಬಾಳೆ ವಿಶ್ವವ್ಯಾಪಿ ಮನ್ನಣೆಯನ್ನು ಪಡೆದಿದ್ದು ತಾಲೂಕಿನಲ್ಲಿ ನಂಜನಗೂಡು ರಸಬಾಳೆ ಬೆಳೆಯ ಕ್ಷೇತ್ರ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಗುರುವಾರ ನಂಜನಗೂಡು ರಸಬಾಳೆ ಕೃಷಿಯಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳ ಬಗ್ಗೆ ಆಯೋಜಿಸಿದ್ದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭೌಗೋಳಿಕ ಮಾನ್ಯತೆ ಪಡೆದಿರುವ ನಂಜನಗೂಡು ರಸಬಾಳೆ ಬೆಳೆಯನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರದಿಂದ ಅಗತ್ಯ ಕ್ರಮಕೈಗೊಂಡಿದ್ದು ಕಳೆದ ಬಜೆಟ್‌ನಲ್ಲಿ ರಸಬಾಳೆ ಬೆಳೆಗೆ ನೆರವಿನ ಘೋಷಣೆ ಮಾಡಲಾಗಿತ್ತು. ಇನ್ನು ನಂಜನಗೂಡು ರಸಬಾಳೆ ಬೆಳೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈತರಿಗೆ ಸುಧಾರಿತ ಪದ್ಧತಿ ಅಳವಡಿಸಿಕೊಂಡು ಬೆಳೆ ಬೆಳೆಯುವ ಬಗ್ಗೆ ರೈತರಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಲಾಗಿದ್ದು ಈಗ ಎರಡನೇ ಬಾರಿಗೆ ರೈತರಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜೆಎಸ್‌ಎಸ್ ಕೆವಿಕೆ ಮುಖ್ಯಸ್ಥ ಜ್ಞಾನೇಶ್, ವಿಷಯ ತಜ್ಞ ಡಾ.ಪ್ರಸಾದ್, ಡಾ.ದೀಪಕ್, ಡಾ.ಮನುಕುಮಾರ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರು, ಸಹಾಯಕ ತೋಟಗಾರಿಕಾ ನಿರ್ದೇಶಕ ನಾಗೇಶ್‌ರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ದೊರೆಸ್ವಾಮಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್, ತಾಲೂಕು ಅಧ್ಯಕ್ಷ ಸತೀಶ್‌ರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.