

ಗೋಣಿಕೊಪ್ಪ: ವಾಹನ ದಟ್ಟನೆ ನಿಯಂತ್ರಣದೊಂದಿಗೆ ನಾಗರಿಕರಿಗೆ ಸೂಕ್ತ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶನಿವಾರ ಮುಂಜಾನೆ ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್, ನೂತನ ಸಬ್‌ಇನ್‌ಸ್ಪೆಕ್ಟರ್ ಪ್ರದೀಪ್ ಕುಮಾರ್ ನಗರದಲ್ಲಿ ಪರಿಶೀಲನೆ ನಡೆಸಿದರು.
ನಗರದಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿ ವರ್ಗ ಖುದ್ದಾಗಿ ಸಂಚಾರ ನಡೆಸಿ ಟ್ರಾಫಿಕ್ ವ್ಯವಸ್ಥೆಗೆ ಬೇಕಾಗುವ ಮಾರ್ಕಿಂಗ್ ಲೈನ್‌ಗಳನ್ನು ಆರಂಭಿಸುವ ಕುರಿತು ಸರ್ವೇ ಕಾರ್ಯ ನಡೆಸಿತು.
ನಗರದಲ್ಲಿ ವಾಹನಗಳು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ತಂಡ ಖುದ್ದಾಗಿ ಪರಿಶೀಲಿಸಿತು. ಅಲ್ಲದೆ ನಗರದ ಪೊನ್ನಂಪೇಟೆ ಜಂಕ್ಷನ್‌ನಿಂದ ಉಮಾಮಹೇಶ್ವರಿ ದೇವಾಲಯದವರೆಗೂ ಶಿವರಾಜ್ ಮುದೋಳ್ ಸಂಚಾರ ನಡೆಸಿ ವಸ್ತು ಸ್ಥಿತಿಯ ಬಗ್ಗೆ ಅವಲೋಕಿಸಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಹಾಗೂ ಪಿಡಿಒ ಸರ್ವೇ ಕಾರ್ಯಕ್ಕೆ ಸಾಥ್ ನೀಡಿದರು. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಅಗತ್ಯವಿರುವ ಪಾರ್ಕಿಂಗ್ ಸ್ಥಳದ ಬಗ್ಗೆ ಮಾರ್ಕಿಂಗ್ ಮಾಡುವ ಕುರಿತು ಸರ್ವೇ ಕಾರ್ಯ ನಡೆಯಿತು. ನಗರದಲ್ಲಿ ಮುಖ್ಯ ರಸ್ತೆಯಲ್ಲಿ ನಿಲುಗಡೆಗೊಂಡಿರುವ ಆಟೋ ನಿಲ್ದಾಣಕ್ಕೆ ತೆರಳಿದ ತಂಡ, ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿತು. ಅಲ್ಲದೆ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಯಿತು.
ನೂತನ ವ್ಯವಸ್ಥೆ ಬಗ್ಗೆ ಕೆಲವು ಅಂಗಡಿ ಮಾಲೀಕರಿಂದ ತಂಡ ಅಗತ್ಯ ಸಲಹೆ ಪಡೆಯಿತು. ರಸ್ತೆ ಬದಿಯಲ್ಲಿರುವ ಟಯರ್ ಶಾಪ್ ಹಾಗೂ ವರ್ಕ್ಸ್ ಶಾಪ್‌ಗಳಿಗೆ ಬಂದ ಪೊಲೀಸ್ ತಂಡ, ವಾಹನವನ್ನು ಅಂಗಡಿಯ ಒಳ ಭಾಗದಲ್ಲಿ ನಿಲ್ಲಿಸಿಕೊಳ್ಳಬೇಕು. ರಸ್ತೆ ಬದಿಯಲ್ಲಿಯೇ ರಿಪೇರಿ ಮಾಡುವುದು, ಟಯರ್‌ಗಳನ್ನು ಶೇಖರಿಸಿಡುವುದು, ರಸ್ತೆಯಲ್ಲಿಯೇ ವಾಹನಗಳಿಗೆ ಗಾಳಿ ಹಾಕುವುದು, ಪಾರ್ಕಿಂಗ್ ಸ್ಥಳದಲ್ಲಿ ರಿಪೇರಿ ಮಾಡುವುದು ಹಾಗೂ ಜಾಗವನ್ನು ಅತಿಕ್ರಮಣ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಲೀಕರಿಗೆ ಅಂತಿಮ ಎಚ್ಚರಿಕೆ ನೀಡಿತು.
ನಗರದಲ್ಲಿನ ರಸ್ತೆ ಬದಿಯನ್ನು ಅತಿಕ್ರಮಿಸಿಕೊಂಡು ಸಾರ್ವಜನಿಕರ ವಾಹನ ಓಡಾಟಕ್ಕೆ ಅಡಚಣೆ ಮಾಡುವುದನ್ನು ಗಮನಿಸಿದ ವೃತ್ತ ನಿರೀಕ್ಷಕರು, ಅಂತಹವರಿಗೆ ಪೊಲೀಸ್ ಠಾಣೆ ವತಿಯಿಂದ ನೋಟಿಸ್ ಜಾರಿಗೊಳಿಸುವಂತೆ ಠಾಣಾಧಿಕಾರಿ ಪ್ರದೀಪ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು. ಟ್ರಾಫಿಕ್ ಸಮಸ್ಯೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಹಾಗೂ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುವ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೆಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್.ಪ್ರಕಾಶ್, ಗಣೇಶ್ ರೈ, ರಾಜಶೇಖರ್, ಪಿಡಿಒ ತಿಮ್ಮಯ್ಯ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.