ಮಲೆತೆರಿಕೆ ಬೆಟ್ಟಕ್ಕೆ ಎನ್‌ಡಿಆರ್‌ಎಫ್ ತಂಡ ಭೇಟಿ

09.06.20 NDRF
Published on

ವಿರಾಜಪೇಟೆ: ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಮಲೆತೆರಿಕೆಬೆಟ್ಟ ಹಾಗೂ ನೆಹರು ನಗರ ಬೆಟ್ಟಕ್ಕೆ ಎನ್‌ಡಿಆರ್‌ಎಫ್ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಳೆದ ಬಾರಿ ಸುರಿದ ಭಾರಿ ಮಳೆಗೆ ಅರಸುನಗರ, ಮಲೆತೆರಿಕೆಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡು ಅಲ್ಲಿನ ನೂರಾರು ಜನರನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿತ್ತು. ಆದರೆ, ಬಿರುಕಿನ ಜಾಗಕ್ಕೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ.

ಕೊಡಗು ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಅಮೂಲ್ಯ ವಾಸುದೇವ್ ಮಾತನಾಡಿ, ಬೆಟ್ಟದಲ್ಲಿ ಬಿರುಕು ಸುಮಾರು 60 ಅಡಿ ಆಳದವರೆಗೂ ಇರುತ್ತದೆ. ಈ ಬಿರುಕು ಅಪಾಯ, ಸುರಕ್ಷತೆ ದೃಷ್ಟಿಯಿಂದ ಇದರ ಸುತ್ತ ಗೋಡೆ ನಿರ್ಮಿಸುವುದು ಅಗತ್ಯ. ಬೆಟ್ಟದಲ್ಲಿನ ನಿವಾಸಿಗಳು ಬಿರುಕು ಸ್ಥಳದಿಂದ ದೂರವಿರಬೇಕು. ಮಳೆಗಾಲದ ಸಮಯದಲ್ಲಿ ನಿವಾಸಿಗಳನ್ನು ಸ್ಥಳಾಂತರಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಎನ್‌ಡಿಆರ್‌ಎಫ್‌ನ ತಂಡದ ಕಮಾಡೆಂಟ್ ಕೆ.ಕೆ.ಉಪಾಧ್ಯಾಯ, ಪಟ್ಟಣ ಪಂಚಾಯಿತಿಯ ಇಂಜಿನಿಯರ್ ಎಂ.ಪಿ.ಹೇಮ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಕ್ಯಾತೇಗೌಡ, ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ.ರಾಜೇಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net