

ಮಂಗಳೂರು : ದ.ಕ.ಜಿಲ್ಲೆಯಾದ್ಯಂತ ಜೂನ್ ಪ್ರಥಮ ವಾರದಲ್ಲೇ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ನೆರೆ, ಪ್ರವಾಹ, ಭೂಕುಸಿತ ಪ್ರದೇಶಗಳಲ್ಲಿ ಸಂಭವನೀಯ ಹಾನಿ ನಿಯಂತ್ರಣ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡ ಜೂ. 1ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದ ಜತೆಗೆ ರಾಜ್ಯದ ತಂಡವನ್ನು ಮಂಗಳೂರು ಮತ್ತು ಪುತ್ತೂರಿನಲ್ಲಿ ನಿಯೋಜಿಸಲಾಗುತ್ತಿದೆ ಎಂದರು.
ಜಿಲ್ಲೆಯ 86 ಗ್ರಾಮಗಳನ್ನು ಸಂಭವನೀಯ ಪ್ರವಾಹ ಪೀಡಿತ, ಭೂಕುಸಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಈ ಗ್ರಾಮಗಳ ಒಟ್ಟು 90 ಪ್ರದೇಶಗಳಲ್ಲಿ ಪ್ರವಾಹ ಪೀಡಿತ ಹಾಗೂ 73 ಪ್ರದೇಶಗಳಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಒಟ್ಟು 97 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ . ಜಿಲ್ಲೆಯಲ್ಲಿ ಮುಂಗಾರು ಪೂರ್ವ ಪ್ರಾಕೃತಿಕ ವಿಕೋಪದಿಂದ ಒಟ್ಟು 124 ಮನೆಗಳು ಹಾನಿಗೊಳಗಾಗಿವೆ. ಸುಳ್ಯ ತಾಲೂಕಿನಲ್ಲಿ 3 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ವಿವಿಧ ತಾಲೂಕುಗಳಲ್ಲಿ ಒಟ್ಟು 16 ಮನೆಗಳು ತೀವ್ರವಾಗಿ ಹಾಗೂ 105 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಭೂಕುಸಿತ, ಪ್ರವಾಹ, ಅಗ್ನಿ ಅವಘಡ ಸಹಿತ ಇತರ ಯಾವುದೇ ವಿಪತ್ತು ಸಂಭವಿಸಿದರೆ ಸಮರ್ಪಕವಾಗಿ ಎದುರಿಸಲು ಪ್ರತಿ ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದಲ್ಲಿಯೂ ಇನ್‌ಸಿಡೆಂಟ್ ಕಮಾಂಡರ್‌ಗಳನ್ನು ನೇಮಕ ಮಾಡಲಾಗಿದೆ. ಇವರು ಸಂಭವನೀಯ ವಿಪತ್ತು ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ, ಸ್ಥಳೀಯವಾಗಿ ಲಭ್ಯವಿರುವ ಬೋಟ್, ಮರ ಕತ್ತರಿಸುವ ಯಂತ್ರ, ಹಗ್ಗ, ಜೆಸಿಬಿ, ಕ್ರೇನ್ ಮೊದಲಾದ ರಕ್ಷಣಾ ವ್ಯವಸ್ಥೆ, ಮಾನವ ಸಂಪನ್ಮೂಲವನ್ನು ಕ್ರೋಡಿಕರಿಸಿಕೊಂಡು ಸಿದ್ಧರಾಗಿರಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ನುರಿತ ಈಜು ತಜ್ಞರು, ಮುಳುಗು ತಜ್ಞರನ್ನು ತಾಲೂಕು ಹಂತದಲ್ಲಿ ಗುರುತಿಸಲಾಗಿದೆ. ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಕಡಲ ಕಿನಾರೆಗಳಲ್ಲಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ 24*7 ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮನಪಾ, ಪೊಲೀಸ್ ಇಲಾಖೆ, ಅಗ್ನಿಶಾಮಕ, ಮೆಸ್ಕಾಂ ಇಲಾಖೆಯಲ್ಲಿಯೂ ಕೂಡಾ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಮೆಸ್ಕಾಂಗೆ ಸಂಬಂಧಿಸಿದ ದೂರುಗಳಿಗೆ ಆರು ಗಂಟೆಯೊಳಗೆ ಸ್ಪಂದಿಸುವುದು ಹಾಗೂ 24 ಗಂಟೆಯೊಳಗೆ ವಿದ್ಯುತ್ ಪೂರೈಕೆ ಪುನರಾರಂಭಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮುಂಗಾರು ಪೂರ್ವ ಸಿದ್ಧತೆ ಜಿಲ್ಲಾಡಳಿತ ಸೂಚನೆ
* ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗೃತಾ ಕ್ರಮ ವಹಿಸುವುದು ಹಾಗೂ ಆಂಬುಲೆನ್ಸ್‌ಗಳನ್ನು
ಸನ್ನದ್ಧವಾಗಿರಿಸಲು ಆರೋಗ್ಯ ಇಲಾಖೆಗೆ ಸೂಚನೆ
*ಮೀನುಗಾರಿಕಾ ನಿಷೇಧ ಅವಧಿಯಲ್ಲಿ ನಾಡದೋಣಿಗಳು ಸಮದ್ರ, ನದಿಗೆ ಹೋಗದಂತೆ ಕಟ್ಟನಿಟ್ಟಿನ ಕ್ರಮ ವಹಿಸಲು ಮೀನುಗಾರಿಕಾ ಇಲಾಖೆಗೆ ನಿರ್ದೇಶನ.
* ಘಾಟಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದರೆ ವಾಹನಗಳು, ಜನಸಾಮಾನ್ಯರು ಆ ಪ್ರದೇಶಕ್ಕೆ ಪ್ರವೇಶಿಸುವ ಮುಂಚಿತವಾಗಿ ಮಾಹಿತಿ ಲಭ್ಯ ಹಾಗೂ ಬದಲಿ ರಸ್ತೆ ವ್ಯವಸ್ಥೆ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ.
*ರಸ್ತೆ ಬದಿ, ಕಟ್ಟಡಗಳ ಮೇಲಿನ ಅಪಾಯಕಾರಿ ಜಾಹೀರಾತು ಫಲಕ, ಫ್ಲೆಕ್ಸ್‌ಗಳಿದ್ದರೆ ತೆರವಿಗೆ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ.
..............................................