ಉದ್ಯಾವರದಲ್ಲಿ ಮುಳುಗಿದ ದೋಣಿ, ಎನ್‌ಡಿಆರ್‌ಎಫ್‌ನಿಂದ ರಕ್ಷಣಾ ಕಾರ್ಯ!

ndrf new
Published on

ಉಡುಪಿ: ಪ್ರಾಕೃತಿಕ ವಿಕೋಪ ಸೂಚನೆ ಮೇರೆಗೆ ಉದ್ಯಾವರ ನದಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಾಗ ನದಿಯಲ್ಲಿ ದೋಣಿ ಮುಳುಗಿದ್ದು, ಎನ್‌ಡಿಆರ್‌ಎಫ್ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಣೆ ಮಾಡಿದೆ !

ಹಾಗೆಂದು ಇದು ನೈಜವಾಗಿ ಸಂಭವಿಸಿದ ಅವಘಡವಲ್ಲ, ಶನಿವಾರ ಉದ್ಯಾವರ ನದಿ ತೀರದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಸಂತ್ರಸ್ತರನ್ನು ರಕ್ಷಿಸಲು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತಾಗಿ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್ ತಂಡ ನಡೆಸಿದ ಕಲ್ಪಿತ ಕಾರ್ಯಾಚರಣೆ ತುಣುಕು ಇದು.

ಪ್ರಾಕೃತಿಕ ವಿಕೋಪ ಮುನ್ನೆಚ್ಚರಿಕೆ ಸಂಭವಿಸುವ ಕುರಿತು ದೊರೆತ ಕಲ್ಪಿತ ಸಂದೇಶದ ಆಧಾರದಲ್ಲಿ, ಸ್ಥಳಕ್ಕೆ ಮೊದಲಿಗೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಹೆಚ್ಚಿನ ನೆರವು ಕೋರಿ ಎನ್‌ಡಿಆರ್‌ಎಫ್ ತಂಡವನ್ನು ಸಂಪರ್ಕಿಸಲಾಯಿತು. ಉದ್ಯಾವರ ನದಿಯಲ್ಲಿ ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಆಗಮಿಸುತ್ತಿದ್ದ ಜನರಿದ್ದ ದೋಣಿ ಮುಳುಗಿತ್ತು. ಕೂಡಲೇ ಕಾರ್ಯಚರಣೆ ನಡೆಸಿದ ಎನ್‌ಡಿಆರ್ ಎಫ್ ತಂಡದ ಯೋಧರು ಮಹಿಳೆಯರು, ವೃದ್ಧರು ಮತ್ತು ಮಕ್ಕಳನ್ನು ಆದ್ಯತೆಯಲ್ಲಿ ರಕ್ಷಿಸಿ, ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಕಲ್ಪಿತ ಕಾರ್ಯಚರಣೆ ಸ್ಥಳದಲ್ಲಿ ಅಗತ್ಯವಿದ್ದ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿತ್ತು, ನಿರ್ಗತಿಕರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರ ಸಹ ತೆರೆಯಲಾಗಿತ್ತು. ಜಿಲ್ಲೆಯ ಪೊಲೀಸ್, ಅಗ್ನಿಶಾಮಕ. ಗೃಹ ರಕ್ಷಕ ದಳ, ನೆಹರು ಯುವ ಕೇಂದ್ರ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ , ಜಿಲ್ಲಾ ವಿಪತ್ತು ಪರಿಣಿತ ರವಿ ಓಜನಹಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net